2.945 ಕೆ.ಜಿ ಚಿನ್ನ ಖರೀದಿಸಿ ವಂಚನೆ: ಆರೋಪಿಯ ಬಂಧನ
ಬೆಂಗಳೂರು: ಗಣ್ಯರ ಹೆಸರು ಬಳಸಿಕೊಂಡು ಕೋಟ್ಯಂತರ ರೂ. ಮೌಲ್ಯದ ಚಿನ್ನವನ್ನು ಖರೀದಿಸಿ ಹಣ ಪಾವತಿಸದೇ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯನ್ನು ಬಾಗಲಗುಂಟೆ ನಿವಾಸಿ ಶ್ವೇತಾಗೌಡ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಪುಲಕೇಶಿ ನಗರ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಕಮರ್ಷಿಯಲ್ ಮುಖ್ಯರಸ್ತೆಯ ನವರತ್ನ ಜ್ಯುವೆಲ್ಸ್ ಮಾಲೀಕ ಸಂಜಯ್ ಭಾಷ್ನಾ ಅವರನ್ನು ಶ್ವೇತಾಗೌಡ ಭೇಟಿಯಾಗಿದ್ದಳು. ತಾನು ಚಿನ್ನಾಭರಣ ವ್ಯಾಪಾರ ಆರಂಭಿಸುತ್ತಿದ್ದು, ನಿಮ್ಮಿಂದಲೇ ಆಭರಣ ಖರೀದಿಸುತ್ತೇನೆ ಎಂದಿದ್ದಳು. ಇದಕ್ಕೆ ಸಂಜಯ್ ಸಹ ಸಮ್ಮಿತಿಸಿದ್ದರು. ಆಕೆಯ ಮಾತು ನಂಬಿ ಆರಂಭದಲ್ಲಿ ಎರಡು ಮೂರು ಬಾರಿ ಶ್ವೇತಾ ನೀಡಿದ್ದ ಮನೆ ವಿಳಾಸಕ್ಕೆ ಚಿನ್ನಾಭರಣ ಕಳುಹಿಸಿದ್ದರು.
ಹೀಗೆ ವಿಶ್ವಾಸಗಳಿಸಿದ ಶ್ವೇತಾ, ಕೊನೆಗೆ ನವರತ್ನ ಜ್ಯುವೆಲರ್ಸ್ನಲ್ಲಿ 2.42 ಕೋಟಿ ರೂ. ಮೌಲ್ಯದ 2.945 ಕೆಜಿ ಚಿನ್ನ ಹಾಗೂ ವಜ್ರಾಭರಣ ಖರೀದಿಸಿ ವಂಚಿಸಿದ್ದಳು. ಅಲ್ಲದೆ ಚಿನ್ನ ಮರಳಿಸಿ ಇಲ್ಲ ಹಣ ಪಾವತಿಸುವಂತೆ ಕೇಳಿದ್ದ ಚಿನ್ನದ ವ್ಯಾಪಾರಿಗೆ ಆಕೆ ಧಮ್ಕಿ ಹಾಕಿದ್ದಳು.
ಈ ಬಗ್ಗೆ ಜ್ಯುವೆಲರ್ಸ್‌ನ ಮಾಲಿಕ ಸಂಜಯ್ ಕಮಿರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪುಲಿಕೇಶಿನಗರ ಉಪವಿಭಾಗದ ಎಸಿಪಿ ಗೀತಾ ಅವರು ತನಿಖೆ ಕೈಗೆತ್ತಿಕೊಂಡಿದ್ದರು. ಇದನ್ನು ತಿಳಿದ ಆರೋಪಿ ಕೂಡಲೇ ನಗರದಿಂದ ಪರಾರಿಯಾಗಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಆಕೆಯನ್ನು ಬಂಧಿಸಲಾಯಿತು. ಜೊತೆಗೆ ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.




