ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯದಲ್ಲಿ ಮೂವರು ಬೇಟೆಗಾರರ ಮೇಲೆ ಎನ್ಕೌಂಟರ್:
ಚಾಮರಾಜನಗರ: ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಬೇಟೆಗಾರರು ಮೃತಪಟ್ಟಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ವನ್ಯಜೀವಿಗಳ ಬೇಟೆಗೆ ಕಾಡಿಗೆ ನುಗ್ಗಿದ್ದ ಬೇಟೆಗಾರರು ಹಾಗೂ ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಖಚಿತ ಮಾಹಿತಿ ಆಧರಿಸಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಗೆ ತೆರಳಿದ್ದ ವೇಳೆ, ಬೇಟೆಗಾರರು ಏಕಾಏಕಿ ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ಮೂವರು ಬೇಟೆಗಾರರು ಮೃತಪಟ್ಟಿದ್ದಾರೆ.
ಮೃತರನ್ನು ಅಂತೋಣಿಸ್ವಾಮಿ, ಪೀಟರ್ ಹಾಗೂ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಒಬ್ಬ ಅರಣ್ಯ ಸಿಬ್ಬಂದಿಗೂ ಗಾಯವಾಗಿದ್ದು, ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಮತ್ತೊಬ್ಬ ಬೇಟೆಗಾರ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ.
ಕಾರ್ಯಾಚರಣೆಯಲ್ಲಿ ಒಂದು ನಾಡಬಂದೂಕು ಹಾಗೂ ಜಿಂಕೆಯ ಮೃತದೇಹ ವಶಪಡಿಸಿಕೊಳ್ಳಲಾಗಿದೆ. ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಕುಟುಂಬಸ್ಥರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ.
ಮೂವರು ಬೇಟೆಗಾರರ ಸಾವಿನ ಬೆನ್ನಲ್ಲೇ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಟೆಗಾರರನ್ನು ಮೊದಲು ಸೆರೆಹಿಡಿದು ಬಳಿಕ ಹತ್ತಿರದಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಅರಣ್ಯ ಇಲಾಖೆ ನಿರಾಕರಿಸಿದ್ದು, ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲೇ ಸಾವು ಸಂಭವಿಸಿದೆ ಎಂದು ಹೇಳಿದೆ.
ಆಕ್ರೋಶಗೊಂಡ ಸ್ಥಳೀಯರು ಶಾಗ್ಯದಲ್ಲಿರುವ ಉಪವಲಯ ಅರಣ್ಯಾಧಿಕಾರಿಗಳ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಕಚೇರಿಯ ಪೀಠೋಪಕರಣಗಳಿಗೆ ಹಾನಿ ಮಾಡಿದ್ದು, ಬೈಕ್ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಘಟನೆಯಿಂದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.




