ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ
ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್‌ನ ದಕ್ಷಿಣ ಕನ್ನಡ ವಲಯದ ಕಾರ್ಯದರ್ಶಿ ಕುಮಾರಿ ರಿಹಾಮ ಕೌಲ ರವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಾಲೇಜಿನ ಅಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕುಮಾರಿ ರಿಹಾಮ ಕೌಲ ರವರು, ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿಯನ್ನು ಯಾವುದೇ ಪರಿಶೀಲನೆಯಿಲ್ಲದೆ ನಂಬದೆ, ಅದರ ಸತ್ಯಾಸತ್ಯತೆಯನ್ನು ಅರಿತುಕೊಂಡು ಮುಂದುವರಿಯಬೇಕು ಎಂದು ಕರೆ ನೀಡಿದರು. ಯುವಜನತೆ ಭಾರತದ ಶಕ್ತಿಯಾಗಿದ್ದು, ದೇಶದ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಭಗತ್ ಸಿಂಗ್ ಹಾಗೂ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅವರ ತ್ಯಾಗ ಮತ್ತು ದೇಶಪ್ರೇಮವನ್ನು ಸ್ಮರಿಸಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಇಂದಿನ ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಭಗತ್ ಸಿಂಗ್ ರವರ ವಿಚಾರಧಾರೆಗಳನ್ನು ಉಲ್ಲೇಖಿಸುತ್ತಾ, ಜನರನ್ನು ದೈಹಿಕವಾಗಿ ಹತ್ತಿಕ್ಕಬಹುದಾದರೂ ಅವರ ಚಿಂತನೆಗಳು ಹಾಗೂ ಆತ್ಮವಿಶ್ವಾಸವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತಾ ಬಿ.ಡಿ. ರವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ, ಎಲ್ಲರಿಗೂ 80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿ, ಸ್ವಾತಂತ್ರ್ಯದ ನಿಜವಾದ ಅರ್ಥ ಸಾರ್ಥಕವಾಗಬೇಕಾದರೆ ‘ವಿವಿಧತೆಯಲ್ಲಿ ಏಕತೆ’ ಎಂಬ ಮೌಲ್ಯಗಳನ್ನು ಪ್ರತಿಯೊಂದು ಮನೆ, ಸಮಾಜ, ಶಾಲೆ ಮತ್ತು ಕಾಲೇಜುಗಳಲ್ಲಿ ಅಳವಡಿಸಬೇಕು ಎಂದು ಹೇಳಿದರು. ಪರಸ್ಪರ ಗೌರವ, ಸಕಾರಾತ್ಮಕ ಮನೋಭಾವ ಹಾಗೂ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸ್ವಾತಂತ್ರ್ಯದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತದನಂತರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ತೃತೀಯ ಬಿ.ಎ. ವಿಭಾಗದ ವಿದ್ಯಾರ್ಥಿನಿ ಕುಮಾರಿ ಫಾತಿಮತ್ ಶಮಿಯಾರವರು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಕುರಿತು ಮಾತನಾಡಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ನೆಬಿಸತ್ ಹಿಬಾರವರು ಇಂದಿನ ಸಂದರ್ಭದಲ್ಲಿ ಸ್ವಾತಂತ್ರ್ಯದ ಮಹತ್ವದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಅನುಗ್ರಹ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಯಾಸಿನ್ ಬೇಗ್, ಪ್ರಧಾನ ಕಾರ್ಯದರ್ಶಿ ಶ್ರೀಯುತ ಇಮರತ್ ಅಲಿ, ಜೊತೆ ಕಾರ್ಯದರ್ಶಿ ಶ್ರೀ ಎನ್.ಕೆ. ಇದಿನಬ್ಬ ಹಾಗೂ ಟ್ರಸ್ಟಿಯಾದ ಹಮೀದ್ ವಿ. ಕೆ.,ಅನುಗ್ರಹ ಸಲಹಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ತಾರಾಕ್ಷಿ, ಪದವಿ ವಿಭಾಗದ ಸಂಯೋಜಕಿ ಶ್ರೀಮತಿ ಆಬಿದ ಬಿ., ಪದವಿ ಪೂರ್ವ ವಿಭಾಗದ ಸಂಯೋಜಕಿ ಶ್ರೀಮತಿ ಮಮಿತಾ ಎಸ್. ರೈ ಹಾಗೂ ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಮತ್ತು ಅನುಗ್ರಹ ಸಲಹಾ ಸಮಿತಿಯ ಸದಸ್ಯೆ ಶ್ರೀಮತಿ ಸಲೀಮಾ ಎಂ. ಉಪಸ್ಥಿತರಿದ್ದರು.
ದ್ವಿತೀಯ ಬಿ.ಕಾಂ. ವಿಭಾಗದ ವಿದ್ಯಾರ್ಥಿನಿ ಕುಮಾರಿ ಝುಲ್ಫಾ ಫಾತಿಮಾ ಹಾಗೂ ದ್ವಿತೀಯ ಬಿ.ಸಿ.ಎ. ವಿಭಾಗದ ವಿದ್ಯಾರ್ಥಿನಿ ಕುಮಾರಿ ಶೌರತ್ ಬಾನು ರವರು ಕಿರಾತ್ ಪಠಿಸಿ, ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ಆಯಿಷತ್ ಜಾಸ್ಮಿನ್ ಧನ್ಯವಾದ ಸಲ್ಲಿಸಿ, ತೃತೀಯ ಬಿ.ಎ. ವಿಭಾಗದ ವಿದ್ಯಾರ್ಥಿನಿ ಕುಮಾರಿ ಶಮ ಶಹರಿನ್ ಕಾರ್ಯಕ್ರಮವನ್ನು ನಿರೂಪಿಸಿದರು.




