ಬೆಳ್ತಂಗಡಿ: ಮಹಿಳೆಯ ಕರಿಮಣಿ ಸರ ಎಳೆದು ಪರಾರಿಯಾಗಿದ್ದ ಆರೋಪಿಯ ಸೆರೆ
ಬೆಳ್ತಂಗಡಿ: ಕೊಯ್ಯೂರಿನ ಮಹಿಳೆಯ ಕರಿಮಣಿ ಸರ ಎಳೆದು ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಯ್ಯೂರು ಗ್ರಾಮದ ಡೆಂಬುಗ ಸಮೀಪದ ಗಿರಿಗುಡ್ಡೆ (ಜಾಲ್) ನಿವಾಸಿ ಕೊರಗಪ್ಪ ಗೌಡರ ಪುತ್ರ ಉಮೇಶ್ ಗೌಡ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೋರಿಯಾರು ನಿವಾಸಿ ದಾಮೋದರ ಭಟ್ ಪತ್ನಿ ರಾಜೀವಿ ಅವರು ಡಿ.9ರಂದು ಮಧ್ಯಾಹ್ನ 2.35ರ ಸುಮಾರಿಗೆ ಬೆಳ್ತಂಗಡಿಗೆ ತೆರಳಿ ಕೊಯ್ಯೂರು ಗ್ರಾಮದ ಪಾಂಬೇಲು ಬಳಿ ಬಸ್ ನಿಂದ ಇಳಿದಿದ್ದಾರೆ. ಬಳಿಕ ತನ್ನ ಕೋರಿಯಾರಿನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯು ಹಿಂಬಾಲಿಸಿಕೊಂಡು ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದಿದ್ದಾನೆ.
ಮಹಿಳೆ ಕರಿಮಣಿಯನ್ನು ಗಟ್ಟಿಯಾಗಿ ಹಿಡಿದುಕೊಂಡ ಕಾರಣ ಅದು ತುಂಡಾಗಿ ಒಂದು ಭಾಗ ಆರೋಪಿಯ ಕೈಗೆ ಸಿಕ್ಕಿದ್ದು, ಅದರ ಸಹಿತ ಆತ ಪಕ್ಕದಲ್ಲಿರುವ ಸರಕಾರಿ ಅರಣ್ಯ ಇಲಾಖೆಯ ಗೇರು ತೋಪಿನತ್ತ ಪರಾರಿಯಾಗಿದ್ದ.
ಬೆಳ್ತಂಗಡಿ ಪೊಲೀಸರು ಹಾಗೂ ಸ್ಥಳೀಯ ಯುವಕರ ತಂಡ ತಡರಾತ್ರಿ ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ. ಬೆಳ್ತಂಗಡಿ ವೃತ್ತ ಉಪನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದ ವಿಶೇಷ ತಂಡ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿ ಡಿ.10ರಂದು ನಸುಕಿನಲ್ಲಿ ಅತನ ಮನೆಯಿಂದ ಆರೋಪಿಯನ್ನು ಬಂಧಿಸಿದ್ದಾರೆ.