ಉಪ್ಪಿನಂಗಡಿ: ಯುವಕನ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಉಪ್ಪಿನಂಗಡಿ: ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸರು ದೇರಳಕಟ್ಟೆ ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ.
ಮೃತ ವ್ಯಕ್ತಿ ಅಸ್ಸಾಂ ಮೂಲದ ದೀಪಕ್ ಎಂದು ತಿಳಿದುಬಂದಿದೆ.
ಡಿ.04 ರಂದು ಪೂರ್ವಾಹ್ನ 10:45 ಗಂಟೆಗೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಹೊಸ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ನಿರ್ಮಾಣ ಹಂತದ ಗ್ರಂಥಾಲಯ ಕಟ್ಟಡದ 1 ನೇ ಮಹಡಿಯಲ್ಲಿ ಸುಮಾರು 30-35 ವರ್ಷ ಪ್ರಾಯದ ಗಂಡಸಿನ ಮೃತದೇಹ ಪತ್ತೆಯಾಗಿತ್ತು. ಮೃತದೇಹದ ಹಣೆ ಮತ್ತು ತಲೆಯಲ್ಲಿ ರಕ್ತದ ಗಾಯಗಳು ಕಂಡು ಬಂದಿದ್ದು, ಮೇಲ್ನೊಟಕ್ಕೆ ಯಾರೋ ವ್ಯಕ್ತಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.ಈ ಬಗ್ಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ. ಕ್ರ 129/2024 ಕಲಂ 103(1)BNS ಅಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕನ್ಯಾಡಿಯ ಕುಂಬ್ರಂಗೆ ನಿವಾಸಿ ಬಾಬು ಯಾನೆ ರುದ್ರ ಎಂಬಾತನನ್ನು ಉಲ್ಲಾಳ ತಾಲ್ಲೂಕಿನ ದೇರಳಕಟ್ಟೆ ಎಂಬಲ್ಲಿಂದ ವಶಕ್ಕೆ ಪಡೆದಿದ್ದಾರೆ. ಆರೋಪಿಯು ಕೃತ್ಯವೆಸಗಿದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದು ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ.
ಆರೋಪಿ ಪತ್ತೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೇಂದ್ರ ಕೆ.ಎಸ್.ಪಿ.ಎಸ್ ರವರ ನಿರ್ದೇಶನದಂತೆ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ಗೌಡರವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ರವರ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್ ಹೆಚ್, ಸಿಬ್ಬಂದಿಗಳಾದ ಶಿವರಾಮ್, ಹಿತೋಷ್, ಗಿರೀಶ್, ರಾಮಣ್ಣ ಗೌಡ, ಹೇಮರಾಜ್, ಮಹದೇವ, ನಾಗರಾಜ್, ಪುತ್ತೂರು ಗ್ರಾಮಾಂತರ ಠಾಣಾ ಸಿಬ್ಬಂದಿ ಪ್ರವೀಣ್ ರೈ, ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿ ಹರಿಶ್ಚಂದ್ರ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ದಿವಾಕರ್ ರವರ ವಿಶೇಷ ತಂಡ ಕಾರ್ಯಾಚರಣೆ ನಡೆಸಿದ್ದಾರೆ.