ಬಿಜೆಪಿ ಪಕ್ಷದಿಂದ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ವಂಚನೆ: ಬಿಗ್ ಬಾಸ್ ಮನೆಯಿಂದ ಕೋರ್ಟ್ ಗೆ ಹಾಜರಾದ ಚೈತ್ರಾ ಕುಂದಾಪುರ
ಬೆಂಗಳೂರು: ಬಿಜೆಪಿ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚನೆಗೈದಿರುವ ಆರೋಪ ಎದುರಿಸುತ್ತಿರುವ ಸಂಘಪರಿವಾರದ ಕಾರ್ಯಕರ್ತೆ ಚೈತ್ರಾ ಕಿರುತೆರೆಯ ಬಿಗ್‍ಬಾಸ್ ಸೀಸನ್- 11ರ ಸೆಟ್‍ನಿಂದಲೇ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ನೋಟಿಸ್ ಬಂದ ಹಿನ್ನೆಲೆ ಸ್ಪರ್ಧಿಯಾಗಿರುವ ಬಿಗ್‍ಬಾಸ್ ಮನೆಯಿಂದ ಹೊರಬಂದ ಚೈತ್ರಾ, ಸೋಮವಾರ ನಗರದ 1ನೆ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾಗಿ ವಾಪಾಸ್ ತೆರಳಿದ್ದಾರೆ.
ಚೈತ್ರಾ, ಶ್ರೀಕಾಂತ್ ಸೇರಿದಂತೆ ಮೂವರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು 2025ರ ಜ.13ಕ್ಕೆ ಮುಂದಿನ ವಿಚಾರಣೆಗೆ ದಿನಾಂಕ ಸೂಚಿಸಿದ್ದಾರೆ.
ಉದ್ಯಮಿ ಗೋವಿಂದ ಪೂಜಾರಿಗೆ ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ ಚೈತ್ರಾ ಮತ್ತು ಆಕೆಯ ತಂಡ ₹ 5 ಕೋಟಿ ವಂಚಿಸಿದ್ದಾರೆ ಎಂದು ಪ್ರಕರಣ ದಾಖಲಿಸಿ, ಆಕೆಯನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದಿದ್ದರು.