ಕಲಬುರಗಿ: ಐದನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ: ಶಿಕ್ಷಕ ಬಂಧನ
ಕಲಬುರಗಿ: ಐದನೇ ತರಗತಿ ಓದುತ್ತಿರುವ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಖಾಸಗಿ ಶಾಲೆಯ ಶಿಕ್ಷಕ ಹಾಜಿಮಲಂಗ ಗಿಣಿಯಾರನನ್ನು ಮಂಗಳವಾರ ಯಡ್ರಾಮಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಜಿಮಲಂಗ ಅವರು ಶಾಲಾ ತರಗತಿಗಳು ಮುಗಿದ ಬಳಿಕ ಟ್ಯೂಷನ್ ಕ್ಲಾಸ್ ಮಾಡುವುದಾಗಿ ಕೆಲವು ಮಕ್ಕಳನ್ನು ರಾತ್ರಿ ಶಾಲೆಯಲ್ಲಿ ಉಳಿಸಿಕೊಳ್ಳುತ್ತಿದ್ದರು. ಕ್ಲಾಸ್ ತೆಗೆದುಕೊಂಡು ಬೆಳಿಗ್ಗೆ ಅವರನ್ನು ಮನೆಗೆ ಕಳುಹಿಸುತ್ತಿದ್ದರು.
ಮೇ ತಿಂಗಳಲ್ಲಿ 11 ವರ್ಷದ ಬಾಲಕಿಗೆ ರಕ್ತಸ್ರಾವವಾಗಿತ್ತು. ಮಗಳು ದೊಡ್ಡವಳು (ಮುಟ್ಟಿನ) ಆಗಿರಬಹುದೆಂದು ಪೋಷಕರು ಸುಮ್ಮನಿದ್ದು, ಎಂದಿನಂತೆ ಶಾಲೆಗೆ ಕಳುಹಿಸಿದ್ದರು. ಅಂದಿನ ರಕ್ತಸ್ರಾವ ಅತ್ಯಾಚಾರದಿಂದ ಆಗಿತ್ತು ಎಂಬುದು ಅವರಿಗೆ ತಡವಾಗಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಗೆ ಹೆಚ್ಚಿನ ಅಂಕದ ಆಮಿಷವೊಡ್ಡಿದ್ದ ಹಾಜಿಮಲಂಗ, ಜೀವ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಮನೆಯಲ್ಲಿ ಯಾರಿಗೂ ಹೇಳಿದಂತೆ ಬೆದರಿಕೆಯೂ ಹಾಕಿದ್ದರು. ನವೆಂಬರ್ 29ರ ರಾತ್ರಿ ಬಾಲಕಿಯನ್ನು ಸಿಬ್ಬಂದಿ ಕೋಣೆಗೆ ಕರೆದೊಯ್ದು ಮತ್ತೊಮ್ಮೆ ಕೃತ್ಯ ಎಸಗಿದ್ದರು. ಬಾಲಕಿಯು ಈ ಬಗ್ಗೆ ತನ್ನ ಪರಿಚಯಸ್ಥರಿಗೆ ತಿಳಿಸಿದ ಬಳಿಕ ಪೋಷಕರಿಗೆ ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಅತ್ಯಾಚಾರ ಘಟನೆಯನ್ನು ಖಂಡಿಸಿ, ಆರೋಪಿಗೆ ಉಗ್ರಶಿಕ್ಷೆಗೆ ಆಗ್ರಹಿಸಿ ತಾಲೂಕಿನ ಕರವೇ, ರೈತ, ಹಾಗೂ ವಿವಿಧ ಸಂಘಟನೆಗಳು ಯಡ್ರಾಮಿ ಬಂದ್ ಮಾಡಿದ್ದಾರೆ. ಪ್ರತಿಭಟನೆ ಬಿರುಸು ಪಡೆದಿದ್ದು, ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.