ಕುಂದಾಪುರ: ಈಚರ್ ವಾಹನ, ಕಾರು, ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದ ಟಿಪ್ಪರ್
ಕುಂದಾಪುರ: ಅತೀ ವೇಗದಿಂದ ಬಂದ ಟಿಪ್ಪರ್ ಲಾರಿ ಚಾಲಕ ಎದುರಿನಲ್ಲಿ ಚಲಿಸುತ್ತಿದ್ದ ಈಚರ್ ವಾಹನ, ಕಾರು ಹಾಗೂ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ ಘಟನೆ ಇಲ್ಲಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣ್ಸೆಮಕ್ಕಿ – ಹಾಲಾಡಿ ಪ್ರಮುಖ ಸಂಪರ್ಕ ರಸ್ತೆಯ ನ್ಯೂ ಪಾರಿಜಾತ ಹೊಟೇಲ್ ಸಮೀಪ ನಡೆದಿದೆ.
ಹುಣ್ಸೆಮಕ್ಕಿಯಿಂದ ತೆಕ್ಕಟ್ಟೆ ಕಡೆಗೆ ಅತೀ ವೇಗದಿಂದ ಚಲಿಸುತ್ತಿದ್ದ ಟಿಪ್ಪರ್ ಮೊದಲು ಎದುರಿನಿಂದ ಬರುತ್ತಿದ್ದ ಈಚರ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಅನಂತರ ಮುಂಭಾಗದಲ್ಲಿ ಚಲಿಸುತ್ತಿದ್ದ ಸ್ಯಾಂಟ್ರೋ ಝಿಂಗ್ ಕಾರಿಗೆ ಢಿಕ್ಕಿ ಹೊಡೆದುಕೊಂಡು ಎಳೆದು ಸಾಗಿದೆ. ಇದೇ ವೇಳೆ ಕೋಟೇಶ್ವರದಿಂದ ಬಿದ್ಕಲ್‌ಕಟ್ಟೆ ಕಡೆಗೆ ಸಾಗುತ್ತಿದ್ದ ಮಾರುತಿ ಸುಜುಕಿ ಸೂಪರ್ ಕ್ಯಾರಿ ಪಿಕ್‌ಅಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ.
ಪರಿಣಾಮ ಕಾರು ಹಾಗೂ ಪಿಕಪ್ ವಾಹನಗಳು ನಜ್ಜುಗುಜ್ಜಾಗಿದೆ. ಪಿಕಪ್ ವಾಹನ ಆಯತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.