ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ; ತರಕಾರಿ ಮಾರುವ ಯುವಕನ ಬಂಧನ
ಮುಂಬೈ : ಸಲ್ಮಾನ್ ಖಾನ್ ಗೆ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ.
ಜಾರ್ಖಂಡ್ ನ ಜೆಮ್ ಶೆಡ್ ಪುರ ಮೂಲದ ತರಕಾರಿ ಮಾರಾಟಗಾರ ಶೇಖ್ ಹುಸೇನ್ ಮೌಸೀನ್(24) ಬಂಧಿತ ಆರೋಪಿ. ನಗರ ಸಂಚಾರ ನಿಯಂತ್ರಣ ಕೊಠಡಿಯ ವಾಟ್ಸ್ ಆ್ಯಪ್ ಸಹಾಯವಾಣಿಗೆ ಕಳೆದ ವಾರ 5 ಕೋಟಿ ಬೇಡಿಕೆಯ ಬೆದರಿಕೆ ಸಂದೇಶ ಬಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅನೇಕ ತಂಡ ರಚಿಸಿ ವಿವಿಧ ರಾಜ್ಯಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಿದ್ದರು.
ಅಲ್ಲದೆ, ಸಂಚಾರ ಪೊಲೀಸರ ವಾಟ್ಸ್ ಆ್ಯಪ್ ಸಹಾಯವಾಣಿಗೆ ಸೋಮವಾರ ಕ್ಷಮೆಯಾಚನೆಯ ಸಂದೇಶ ಬಂದಿದೆ. ಬೆದರಿಕೆ ಸಂದೇಶ ಕಳುಹಿಸಿದ್ದ ಮೊಬೈಲ್ ಫೋನ್ ಸಂಖ್ಯೆಯಿಂದಲೇ ಕ್ಷಮೆಯಾಚನೆಯ ಸಂದೇಶ ಬಂದಿದೆ ಎಂದು ಪೊಲೀಸರು ತಿಳಿಸಿದ್ದರು.
ಸಲ್ಮಾನ್ ಖಾನ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದ ತಂಡದ ಶಾರ್ಪ್ ಶೂಟರ್ ಒಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಹರಿಯಾಣದ ಸುಖ್ಬೀರ್ ಸಿಂಗ್ ಎಂಬಾತನನ್ನು ಬಂಧಿಸಲಾಗಿತ್ತು.
ಸಲ್ಮಾನ್ ಖಾನ್ ಖಾನ್ ಗೆ ಈ ಹಿಂದೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಿಂದ ಬೆದರಿಕೆ ಕರೆಗಳು ಬಂದಿದ್ದು, ಸದ್ಯ ಸಲ್ಮಾನ್ ಖಾನ್ ಗೆ ಭದ್ರತೆ ಒದಗಿಸಲಾಗಿದೆ. ಅಲ್ಲದೇ, ಸಲ್ಮಾನ್ ಖಾನ್ ಹೊಸ ಬುಲೆಟ್ ಪ್ರೂಫ್ ಕಾರನ್ನೂ ಖರೀದಿಸಿದ್ದಾರೆ.