ಲೋಕಸಭಾ ಚುನಾವಣೆ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಯಿಂದ ಸ್ಪರ್ಧಿಸಲಿದ್ದಾರೆ ರಾಜ್ಯದ್ಯಕ್ಷ ಸುರೇಂದ್ರನ್
ವಯನಾಡ್: ಭಾರತೀಯ ಜನತಾ ಪಕ್ಷವು ಕೇರಳ ಅಧ್ಯಕ್ಷ ಕೆ. ಸುರೇಂದ್ರನ್ ಅವರನ್ನು ನೇರವಾಗಿ ವಯನಾಡ್ ಕ್ಷೇತ್ರದಿಂದ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರ ವಿರುದ್ಧ ಕಣಕ್ಕಿಳಿಸಲಿದೆ. ಬಿಜೆಪಿ ತನ್ನ ಐದನೇ ಪಟ್ಟಿಯಲ್ಲಿ ಕೆ. ಸುರೇಂದ್ರನ್ ಅವರಿಗೆ ವಯನಾಡ್ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಭಾರತೀಯ ಜನತಾ ಪಕ್ಷ, ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರನ್ನು ವಯನಾಡ್ ಕ್ಷೇತ್ರದಿಂದ ಕಣಕ್ಕೆ ಇಳಿಸಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಸಿಪಿಐನ ಆಯನಿ ರಾಜಾ ಈ ಕ್ಷೇತ್ರದಲ್ಲಿ ಈಗಾಗಲೇ ಸ್ಪರ್ಧೆಯಲ್ಲಿದ್ದು, ಪ್ರಬಲ ತ್ರಿಕೋನ ಸ್ಪರ್ಧೆಗೆ ಕ್ಷೇತ್ರ ಸಜ್ಜಾಗಿದೆ.
ರಾಹುಲ್ ಗಾಂಧಿ ವಯನಾಡ್ ನಿಂದ ನಿರ್ಗಮಿತ ಸಂಸದರಾಗಿದ್ದು, ಅಲ್ಲಿಂದ ಸ್ಪರ್ಧಿಸುವುದು ಖಚಿತವಾಗಿದೆ. ಮತ್ತೊಂದೆಡೆ, ಅವರು ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. 2019 ರಲ್ಲಿ, ಸ್ಮೃತಿ ಇರಾನಿ ಅವರು ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಮತ್ತು ಅವರು ಅಮೇಥಿಯಿಂದ ರಾಹುಲ್ ಗಾಂಧಿಯನ್ನು ಸೋಲಿಸಿದರು. ಈ ಕಾರಣಕ್ಕಾಗಿ ಬಿಜೆಪಿ ವಯನಾಡ್‌ನಿಂದ ಕೆ ಸುರೇಂದ್ರನ್ ರೂಪದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
2020ರಲ್ಲಿ ಬಿಜೆಪಿ ಸುರೇಂದ್ರನ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿತು. 2019 ರಲ್ಲಿ, ಕೆ ಸುರೇಂದ್ರನ್ ಪತ್ತನಂತಿಟ್ಟದಿಂದ ಚುನಾವಣೆಗೆ ಸ್ಪರ್ಧಿಸಿದ್ದರು, ಆದರೆ ಯಶಸ್ವಿಯಾಗಲಿಲ್ಲ. 2021ರ ವಿಧಾನಸಭಾ ಚುನಾವಣೆಯಲ್ಲಿ ಸುರೇಂದ್ರನ್ ಕೊನ್ನಿ ಹಾಗೂ ಮಂಜೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿ ಕ್ರಮವಾಗಿ 32811 ಹಾಗೂ 67 ಸಾವಿರ ಮತಗಳನ್ನು ಪಡೆದಿದ್ದರು. ಕೋಝಿಕ್ಕೋಡ್ ಜಿಲ್ಲೆಯ ಉಳ್ಳಿಯೇರಿಯಲ್ಲಿ ಜನಿಸಿದ ಸುರೇಂದ್ರನ್, ಕಳೆದ 10 ವರ್ಷಗಳಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು.





