ಹರ್ಯಾಣ ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ನೇಮಕ
ಚಂಡೀಗಢ: ಕ್ಷಿಪ್ರ ಬೆಳವಣಿಗೆಯಲ್ಲಿ ಹರ್ಯಾಣ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಬಿಜೆಪಿ- ಜೆಜೆಪಿ ಮೈತ್ರಿ ಮುರಿದು ಬಿದ್ದ ಬಳಿಕ ಮನೋಹರ್ ಲಾಲ್ ಖಟ್ಟರ್ ಅವರು ಮಂಗಳವಾರ ರಾಜೀನಾಮೆ ನೀಡಿದ್ದು, ಇದೀಗ ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಅವರನ್ನು ನೇಮಿಸಲಾಗಿದೆ.
ಮಂಗಳವಾರ ಸಂಜೆ 5 ಗಂಟೆಗೆ ನಯಾಬ್ ಸಿಂಗ್ ಸೈನಿ ಅವರು ಹರ್ಯಾಣದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿ ಹೇಳಿದೆ.
ಮನೋಹರ್ ಲಾಲ್ ಖಟ್ಟರ್ ಮತ್ತು ಅವರ ಇಡೀ ಕ್ಯಾಬಿನೆಟ್ ಹರ್ಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ರಾಜೀನಾಮೆ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಈ ನೇಮಕ ನಡೆದಿದೆ. ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ನಡೆಸಲಿದ್ದಾರೆ ಎನ್ನಲಾಗಿದೆ.
ಕುರುಕ್ಷೇತ್ರ ಸಂಸದ ಮತ್ತು ಒಬಿಸಿ ಸಮುದಾಯದ ನಾಯಕ ನಯಾಬ್ ಸಿಂಗ್ ಸೈನಿ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹರಿಯಾಣ ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಸೈನಿ ಅವರು ನರೇಂಗರ್ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಹರಿಯಾಣ ವಿಧಾನಸಭೆಗೆ ಹಲವು ಬಾರಿ ಆಯ್ಕೆಯಾಗಿದ್ದಾರೆ.





