ಬೆಳ್ತಂಗಡಿ: ತಾಲೂಕಿನ 9 ಪಟಾಕಿ ಅಂಗಡಿಗಳಿಗೆ ಅಧಿಕಾರಿಗಳಿಂದ ದಾಳಿ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿದ ಘಟನೆಯ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಬೆಳ್ತಂಗಡಿ ಕಂದಾಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಬೆಳ್ತಂಗಡಿ ತಾಲೂಕಿನ 9 ಪಟಾಕಿ ಮಳಿಗೆ ಮೇಲೆ ದಾಳಿ ನಡೆಸಿದ್ದಾರೆ.
ಅಗ್ನಿಶಾಮಕ ದಳದ ರಿಜಿನಲ್ ಫೈರ್ ಅಧಿಕಾರಿ ರಂಗನಾಥ್ ಮತ್ತು ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇದೇ ವೇಳೆ ಎರಡು ಅಂಗಡಿಯಲ್ಲಿ ಅಧಿಕ ಮಟ್ಟದ ಪಟಾಕಿ ದಾಸ್ತಾನು ಮಾಡಿರುವುದು ದಾಳಿ ವೇಳೆ ತಿಳಿದುಬಂದಿದೆ. ಹೀಗಾಗಿ ಬೆಳ್ತಂಗಡಿಯ ಪ್ರಭಾತ್ ಸ್ಟೋರ್ ಮತ್ತು ಉಜಿರೆಯ ಪ್ರಭಾತ್ ಸ್ಟೋರ್ ಪಟಾಕಿ ಗೋಡೌನ್ಗಳನ್ನು ಸೀಜ್ ಮಾಡಲಾಗಿದೆ.
ಈ ಮಧ್ಯೆ, ವೇಣೂರು ಸ್ಫೋಟ ಪ್ರಕರಣದ ಆರೋಪಿ ಕುಚ್ಚೋಡಿ ನಿವಾಸಿ ಬಶೀರ್, ಕೆಲಸಗಾರ ಹಾಸನದ ಕಿರಣ್ ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೇ ವೇಳೆ, ಆರೋಪಿಗಳಿಬ್ಬರನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಧೀಶರು ಆದೇಶ ಮಾಡಿದ್ದಾರೆ. ಆರೋಪಿಗಳ ಪರ ವಕೀಲ ಅರುಣ್ ಬಂಗೇರ ವಾದ ಮಂಡಿಸಿದ್ದರು.






