ಹಿರಿಯ ಪತ್ರಕರ್ತ ವಿನೋದ್ ದುವಾ ನಿಧನ
ನವದೆಹಲಿ: ಅನಾರೋಗ್ಯದಿಂದ ಅಪೊಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಪತ್ರಕರ್ತ ವಿನೋದ್ ದುವಾ ಶನಿವಾರ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಖ್ಯಾತ ಪತ್ರಕರ್ತರಾಗಿದ್ದ ವಿನೋದ್ ದುವಾ ಅವರಿಗೆ ಇದೇ ವರ್ಷದ ಆರಂಭದಲ್ಲಿ ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರೇಡಿಯಾಲಜಿಸ್ಟ್ ಆಗಿದ್ದ ಅವರ ಪತ್ನಿ ಪದ್ಮಾವತಿ ಕೂಡಾ ಕೊರೋನಾದಿಂದ ಜೂನ್ ನಲ್ಲಿ ನಿಧನರಾಗಿದ್ದರು.
ವಿನೋದ್ ದುವಾ ದೂರದರ್ಶನ ಹಾಗೂ ಎನ್ ಡಿಟಿವಿಯಲ್ಲಿ ಕಾರ್ಯನಿರ್ವಹಿಸಿದ್ದರು. ನವದೆಹಲಿಯ ಲೋಧಿ ಸ್ಮಶಾನದಲ್ಲಿ ಭಾನುವಾರ ವಿನೋದ್ ದುವಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರಿ ಮಲ್ಲಿಕಾ ದುವಾ ತಿಳಿಸಿದ್ದಾರೆ.





