ಶ್ರೀದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿ:
ಧರ್ಮಾನುಷ್ಠಾನದಿಂದ ಆರೋಗ್ಯಕರ ಸಮಾಜದ ನಿರ್ಮಾಣ: ಒಡಿಯೂರು ಶ್ರೀ
ವಿಟ್ಲ: ದತ್ತಾತ್ರೇಯ ಜ್ಞಾನದ ಅವತಾರವಾಗಿದ್ದು, ಸಮಾಜದ ಗೊಂದಲಕ್ಕೆ ಅರಿವಿನ ಕೊರತೆ ಕಾರಣವಾಗಿದೆ. ಶರೀರವನ್ನು ಹೊಲಿಯುವ ಶಸ್ತ್ರ ಮತ್ತು ಅಂತರಂಗವನ್ನು ಬದಲಿಸುವ ಶಾಸ್ತ್ರ ದತ್ತಾವತಾರದಲ್ಲಿ ವಿಶೇಷವಾಗಿದೆ. ಧರ್ಮ ಮತ್ತು ಸಂಸ್ಕೃತಿ ಜತೆಗೆ ಸಾಗುವುದಾಗಿದ್ದು, ಸಂರಕ್ಷಣೆ ರಹಿತವಾದ ಧರ್ಮದಿಂದ ಅಪಾಯ ಕಾದಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀದತ್ತ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿ, ಶ್ರೀಮದ್ಭಾಗವತ ಪ್ರವಚನ – ಯಕ್ಷಗಾನ ತಾಳಮದ್ದಳೆ ಸಪ್ತಾಯ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಂಸ್ಕೃತಿಯ ಉಳಿವಿಗಾಗಿ ಬದುಕಿಗೆ ಬೆಳಕು ನೀಡುವ ದೀಪವನ್ನು ಬೆಳಗುವ ಕಾರ್ಯವಾಗಬೇಕು. ಭಾಗವತ ಜೀವನಕ್ಕೆ ಸರಿಯಾದ ಹಾದಿಯನ್ನು ಹಾಕಿಕೊಡುತ್ತದೆ. ಆಧ್ಯಾತ್ಮವನ್ನು ಬಳಸಿಕೊಂಡು ಜೀವನವನ್ನು ಬಂಧ ಮುಕ್ತಗೊಳಿಸಬೇಕು. ಪ್ರೇಮ ತತ್ವದ ಮೂಲಕ ಅಂತರಂಗದ ಕಡೆಗೆ ಸಾಗಿದಾಗ ಶಾಂತಿ ನೆಮ್ಮದಿಯನ್ನು ಪಡೆಯಬಹುದಾಗಿದೆ. ಶ್ರೇಷ್ಠವಾದ ಧರ್ಮ ಬದುಕಿಗೆ ಅನಿವಾರ್ಯವಾಗಿದ್ದು, ಧರ್ಮಾನುಷ್ಠಾನದಿಂದ ಆರೋಗ್ಯಕರ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಕಲಾವಿದ ನವನೀತ ಶೆಟ್ಟಿ ಕದ್ರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಪಿ. ಲಿಂಗಪ್ಪ ಗೌಡ, ಮಂಗಳೂರು ಭಾರತಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಆಡಳಿತ ನಿರ್ದೇಶಕ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು ಅವರಿಗೆ ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಗೌರವಿಸಲಾಯಿತು. ಬೆಳಿಗ್ಗೆ ಕ್ಷೇತ್ರದಲ್ಲಿ ಶ್ರೀ ದತ್ತಮಾಲಾಧಾರಿಗಳಿಂದ ನಾಮಸಂಕೀರ್ತನಾ ಶೋಭಾಯಾತ್ರೆ, ಮಧುಕರಿ, ಮಂತ್ರಾಕ್ಷತೆ, ಮಹಾಸಂತಾರ್ಪಣೆ, ರಂಗಪೂಜೆ, ಬೆಳ್ಳಿರಥೋತ್ಸವ ನಡೆಯಿತು.
ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಉದ್ಯಮಿ ವಾಮಯ್ಯ ಶೆಟ್ಟಿ ಮುಂಬಯಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಮುಂಬಯಿ ಅಧ್ಯಕ್ಷ ದಾಮೋದರ ಶೆಟ್ಟಿ, ಪುಣೆ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಶ್ರೀಮದ್ಬಭಾಗವತ ಪ್ರವಚನಕಾರ ಹಿರಣ್ಯ ವೆಂಕಟೇಶ್ವರ ಭಟ್, ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಅಧ್ಯಕ್ಷೆ ಶ್ವೇತಾ ಚಂದ್ರಹಾಸ ರೈ ಮತ್ತಿತರರು ಉಪಸ್ಥಿತರಿದ್ದರು.
ರೇಣುಕಾ ಎಸ್. ರೈ. ಪ್ರಾರ್ಥಿಸಿದರು. ಶೇಖರ್ ಎಸ್. ರೈ ಸ್ವಾಗತಿಸಿದರು. ಸುಬ್ರಹ್ಮಣ್ಯ ಟಿ., ಮಾತೇಷ್ ಭಂಡಾರಿ, ಜಯಲಕ್ಷ್ಮೀ ಪ್ರಭು, ಜಯಂತ ಅಜೇರು, ಅನಿತಾ ಪುರಸ್ಕೃತರ ಪರಿಚಯ ಮಾಡಿದರು. ಜಯಂತ ಅಜೇರು ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.