ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ನೋಡುತ್ತಿದ್ದಾಗ ಟಿವಿ ಆಫ್ ಮಾಡಿದ ಮಗನನ್ನೇ ಕೊಂದ ತಂದೆ
ಲಕ್ನೋ: ಕ್ಷುಲಕ ಕಾರಣಕ್ಕೆ ಮಗನನ್ನೇ ಕೊಲೆಗೈದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಭಾನುವಾರ(ನ.19 ರಂದು) ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಈ ಘಟನೆ ನಡೆದಿದೆ.
ಮನೆಯಲ್ಲಿ ಗಣೇಶ್ ಪ್ರಸಾದ್ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಮಗ ದೀಪಕ್ ನಿಶಾದ್ ಅಪ್ಪ ಮೊದಲು ರಾತ್ರಿಯ ಊಟವನ್ನು ತಯಾರಿಸಿ ನಂತರ ಕ್ರಿಕೆಟ್ ನೋಡಿಯೆಂದು ಹೇಳಿದ್ದಾನೆ.
ಎಷ್ಟು ಹೇಳಿದರೂ ಕೇಳದ್ದಕ್ಕೆ ಮಗ ದೀಪಕ್ ಸೀದಾ ಹೋಗಿ ಟಿವಿಯ ಸ್ವಿಚ್ ನ್ನು ಆಫ್ ಮಾಡಿದ್ದಾನೆ. ಇದರಿಂದ ತಂದೆ – ಮಗನ ನಡುವೆ ವಾಗ್ವಾದ ಶುರುವಾಗಿದೆ.
ಇದಾದ ಬಳಿಕ ದೈಹಿಕವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸಿಟ್ಟಾದ ತಂದೆ ಗಣೇಶ್ ವಿದ್ಯುತ್ ತಂತಿಯಿಂದ ಮಗನ ಕತ್ತು ಹಿಸುಕಿ ಕೊಲೆ ಮಾಡಿ, ಪರಾರಿ ಆಗಿದ್ದು, ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ.