ಮಲಯಾಳ ಕಿರುತೆರೆಯ ನಟಿ ಡಾ.ಪ್ರಿಯಾ ಹೃದಯಾಘಾತದಿಂದ ನಿಧನ
ತಿರುವನಂತಪುರಂ: ಮಲಯಾಳ ಭಾಷೆಯ ಜನಪ್ರಿಯ ಕಿರುತೆರೆ ಧಾರಾವಾಹಿಯ ನಟಿ ಡಾ.ಪ್ರಿಯಾ (35) ಅವರು ಹೃದಯಾಘಾತದಿಂದ ನಿನ್ನೆ ನಿಧನ ಹೊಂದಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಅವರು ಡಾ. ಪ್ರಿಯಾ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದು, ವೈವಾಹಿಕ ಜೀವನಕ್ಕೆ ಕಾಲಿರಿಸಿದ ಬಳಿಕ ನಟನೆಯಿಂದ ದೂರವಿದ್ದರು. ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ನಿನ್ನೆ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದ ವೇಳೆಯೇ ಆಕೆಗೆ ಹೃದಯ ಸ್ತಂಭನವಾಗಿದೆ. ಆಕೆಯ ಶಿಶು ಈಗ ಐಸಿಯುನಲ್ಲಿದೆ. ಆಕೆಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಎನ್ನಲಾಗಿದೆ. ಆಕೆ ಎಂಡಿ ವ್ಯಾಸಂಗ ಮಾಡುತ್ತಿದ್ದು, ತಿರುವನಂತಪುರಂನ ಪಿಆರ್‌ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
‘ಮಲಯಾಳಂ ಟಿವಿ ಮಾಧ್ಯಮ ಲೋಕದಲ್ಲಿ ಮತ್ತೊಂದು ಅನಿರೀಕ್ಷಿತ ಸಾವಿನ ಸುದ್ದಿ ಬಂದಿದೆ. ನಟಿ ಡಾ.ಪ್ರಿಯಾ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು 35 ವರ್ಷದ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು’ ಎಂದು ನಟ, ನಿರೂಪಕ ಕಿಶೋರ್ ಸತ್ಯ ಫೇಸ್‌ಬುಕ್ ಪೋಸ್ಟ್ ನಲ್ಲಿ ನೋವಿನ ವಿಚಾರ ಹಂಚಿಕೊಂಡಿದ್ದಾರೆ. ಸೋಮವಾರವಷ್ಟೇ ಜನಪ್ರಿಯ ಮಲಯಾಳಂ ಟಿವಿ ಮತ್ತು ಚಲನಚಿತ್ರ ನಟಿ 35 ವರ್ಷದ ರೆಂಜೂಷಾ ಮೆನನ್ ಅವರು ತಿರುವನಂತಪುರಂನಲ್ಲಿ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.





