May 11, 2026

ಮಾಂಸದೂಟ ಮಾಡಿ ದೇವಸ್ಥಾನಕ್ಕೆ ಹೋದ್ರಾ ಸಿ.ಟಿ. ರವಿ?’: ವೈರಲ್ ಆಯ್ತು ಪೋಟೋ

0
DB-08022023-fishrise.jpg

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮೀನೂಟ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆನ್ನುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ಫೆಬ್ರವರಿ 19ರ ಭಾನುವಾರ ಭಟ್ಕಳದ ಶಿರಾಲಿಯಲ್ಲಿ ಶಾಸಕ ಸುನೀಲ್ ನಾಯ್ಕ ಅವರ ಮನೆಯಲ್ಲಿ ಸಿ.ಟಿ. ರವಿ ಮೀನೂಟ ಸೇವಿಸಿದ್ದು, ಬಳಿಕ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಸಹಿತ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಸುನೀಲ್ ನಾಯ್ಕ ಅವರ ಮನೆಯಲ್ಲಿ ಸಿ.ಟಿ. ರವಿ ಊಟ ಮಾಡುತ್ತಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ಈ ಫೋಟೋ ತೀವ್ರ ವಿವಾದ ಸೃಷ್ಟಿಸಿದೆ.

ಇನ್ನು ವಿವಾದಕ್ಕೆ ಸ್ಪಷ್ಟನೆ ನೀಡಿರುವ ಬಿಜೆಪಿ ಶಾಸಕ ಸುನೀಲ್ ನಾಯ್ಕ, ಅಂದು ನಮ್ಮ ಮನೆಯಲ್ಲಿ ಮಾಂಸದೂಟ ಮಾಡಿಲ್ಲ. ಸಿ.ಟಿ. ರವಿ ಅವರು ಮಾಂಸದೂಟ ಮಾಡಿಲ್ಲ. ಗೋಬಿ ಮಂಚೂರಿ, ಅನ್ನ, ಚಪಾತಿ, ರಸಂನ್ನು ಮಾತ್ರ ಅವರು ಸೇವನೆ ಮಾಡಿದ್ದಾರೆ. ವಿವಾದ ಎಬ್ಬಿಸಲೆಂದೇ ಫೋಟೋ ವೈರಲ್ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ವಿಚಾರವಾಗಿ ಬಾಗಲಕೋಟೆಯ ಹುನಗುಂದದಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಭೂತದ ಬಾಯಲ್ಲಿ ಭಗವದ್ಗೀತೆ ಎಂಬುದು ಜನರಿಗೆ ಈಗ ಗೊತ್ತಾಗಿದೆ. ಬಿಜೆಪಿಯವರಲ್ಲಿ ಯಾವುದೇ ಸ್ಪಷ್ಟ ವಿಚಾರಧಾರೆಗಳಿಲ್ಲ. ಇದೆಲ್ಲ ಮಾತನಾಡುವ ವಿಷಯವೂ ಅಲ್ಲ ಎಂದರು.

ಈ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಂಸದೂಟ ಸೇವಿಸಿ ಧರ್ಮಸ್ಥಳ ಕ್ಷೇತ್ರಕ್ಕೆ ತೆರಳಿದ್ದರು ಎಂಬ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಈ ವಿಚಾರವನ್ನು ಹಿಡಿದುಕೊಂಡು ಸಿದ್ದರಾಮಯ್ಯ ಅವರ ಕಾಲೆಳೆದಿತ್ತು.

Leave a Reply

Your email address will not be published. Required fields are marked *

error: Content is protected !!