August 10, 2026

ರಾಜ್ಯದ ಎಲ್ಲ ಹೋಟೆಲ್‌ಗಳ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ: ಆರೋಗ್ಯ ಸಚಿವ ಯು.ಟಿ. ಖಾದರ್

0
IMG-20260810-WA0146

ಬೆಂಗಳೂರು: ರಾಜ್ಯದ ಹೋಟೆಲ್‌ಗಳಲ್ಲಿ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಹತ್ವದ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ. ಹೋಟೆಲ್‌ಗಳ ಅಡುಗೆ ಮನೆಯಲ್ಲಿ ಆಹಾರ ತಯಾರಿಸುವ ವಿಧಾನ ಮತ್ತು ಅಲ್ಲಿನ ನೈರ್ಮಲ್ಯವನ್ನು ಗ್ರಾಹಕರೇ ನೇರವಾಗಿ ವೀಕ್ಷಿಸುವಂತೆ ಕ್ಯಾಮೆರಾ ಅಳವಡಿಸುವ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಹಕರಿಗೆ ಪೂರೈಸಲಾಗುವ ಆಹಾರ ಹೇಗೆ ಸಿದ್ಧವಾಗುತ್ತಿದೆ ಮತ್ತು ಅಲ್ಲಿ ನೈರ್ಮಲ್ಯ ಪಾಲನೆಯಾಗುತ್ತಿದೆಯೇ ಎಂಬ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಸಿಗುವಂತಿರಬೇಕು. ಹೋಟೆಲ್‌ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗುವಂತೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಕುರಿತು ಶೀಘ್ರದಲ್ಲೇ ಹೊಸ ಕಾನೂನು ಮತ್ತು ಮಾರ್ಗಸೂಚಿಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯಲ್ಲಿ ಲೋಪ ಎಸಗುವ ಹೋಟೆಲ್‌ಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ. ಈಗಾಗಲೇ ರಾಜಧಾನಿಯ ಹಲವು ದೊಡ್ಡ ಹೋಟೆಲ್‌ಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಆಹಾರ ಪದಾರ್ಥಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ (ಲ್ಯಾಬ್) ಕಳುಹಿಸಿದ್ದಾರೆ. ಲ್ಯಾಬ್ ವರದಿ ಬಂದ ತಕ್ಷಣ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಅಂತಹ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ನಿಯಮ ಉಲ್ಲಂಘಿಸುವ ಹೋಟೆಲ್‌ಗಳಿಗೆ ಮೊದಲ ಹಂತದಲ್ಲಿ ನೋಟಿಸ್ ಜಾರಿ ಮಾಡಲಾಗುವುದು. ನೋಟಿಸ್ ನೀಡಿದ ಮೇಲೆಯೂ ತಪ್ಪುಗಳನ್ನು ಸರಿಪಡಿಸಿಕೊಳ್ಳದೆ ಉಲ್ಲಂಘನೆ ಮುಂದುವರಿಸಿದರೆ, ಅಂತಹ ಹೋಟೆಲ್‌ಗಳನ್ನು ಮುಲಾಜಿಲ್ಲದೆ ಬಂದ್ ಮಾಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಅಧಿಕಾರಿಗಳು ಯಾವುದೇ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಗ್ರಾಹಕರ ಆರೋಗ್ಯದ ಜೊತೆ ಆಟವಾಡುವ ಅಥವಾ ಮೋಸ ಮಾಡುವ ಹೋಟೆಲ್‌ಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಖಡಕ್ ಮುನ್ನೆಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!