ಮಂಗಳೂರು: ದೈವಸ್ಥಾನದಿಂದ ಕಾಣಿಕೆ ಹುಂಡಿ ಕಳವು ಪ್ರಕರಣ: ಆರೋಪಿಯ ಬಂಧನ
ಮಂಗಳೂರು: ಸುರತ್ಕಲ್ ಮಧ್ಯ ಕೊಡಿಪಾಡಿಯಲ್ಲಿರುವ ಕೋರ್ದಗಬ್ಬು ದೈವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 5ರಂದು ಬೆಳಗಿನ ಜಾವ ಸುಮಾರು 1.30ರ ವೇಳೆಗೆ ಕಳ್ಳತನ ನಡೆದಿದ್ದು, ಕಳ್ಳನು ಕಬ್ಬಿಣದ ಆಯುಧ ಬಳಸಿ ದೈವಸ್ಥಾನದ ಬಾಗಿಲು ಹಾಗೂ ಕಿಟಕಿಯನ್ನು ಮುರಿದು ಒಳನುಗ್ಗಿದ್ದಾನೆ. ಬಳಿಕ ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಹೋಗಿದ್ದು, ಹುಂಡಿಯಲ್ಲಿದ್ದ ಸುಮಾರು ₹15,000 ನಗದು ಹಣವನ್ನು ಕಳವು ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಆಗಸ್ಟ್ 10ರಂದು ಖಚಿತ ಮಾಹಿತಿಯ ಮೇರೆಗೆ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಸುಖೇಶ್ ನಾಯ್ಕ್ (40), ರಾಮಚಂದ್ರ ನಾಯ್ಕ್ ಅವರ ಪುತ್ರ, ಬೆಲ್ಲಪ್ಪಳ್ಳಿ, ಕುಕ್ಕಿಕಟ್ಟೆ, ಮಂಗಳ ಮಿಲ್, ಕುಕ್ಕಿಹಳ್ಳಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.




