ಕಾರ್ಕಳ: ಪಾಲಿಶ್ ಮಾಡುವ ನೆಪದಲ್ಲಿ ಗ್ರಾಹಕರಿಂದ ಒಡವೆ ಪಡೆದು ಮಾರಾಟ: ಮಾಲಕನಿಗೆ ಜೈಲು ಶಿಕ್ಷೆ ಪ್ರಕಟ
ಕಾರ್ಕಳ: ಗ್ರಾಹಕರಿಗೆ ಚಿನ್ನಾಭರಣ ವಂಚನೆಗೈದ ಜುವೆಲ್ಲರ್‍ಸ್‌ವೊಂದರ ಮಾಲಕನೊಬ್ಬ ಮೂರನೇ ಪ್ರಕರಣದಲ್ಲೂ ಅಪರಾಧಿ ಎಂದು ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದೆ.
ಕಾರ್ಕಳ ನಗರದ ಮಾರ್ಕೇಟ್ ರಸ್ತೆಯಲ್ಲಿ ಶ್ರೀ ದುರ್ಗಾ ಜುವೆಲ್ಲರ್‍ಸ್ ವ್ಯವಹಾರ ನಡೆಸುತ್ತಿದ್ದ ರವೀಂದ್ರ ಆಚಾರ್ಯ ಪ್ರಕರಣದ ಅಪರಾಧಿ.
ರೋಸ್ಲಿ ಸೋನ್ಸ್‌ಯವರ ಬಂಗಾರದ ಒಡವೆಗಳನ್ನು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ವಿವಿಧ ಹಂತಗಳಲ್ಲಿ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದನು. ಅವುಗಳನ್ನು ಕರಗಿಸಿ ಪ್ರಭಾರರ್ ಪಾಟೀಲ್ ಯಾನೆ ಧನಂಜಯ್ ಶಿಂಧೆ ಯವರಿಗೆ ಮಾರಾಟ ಮಾಡಿದನು. ಪಡೆದ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಗ್ರಾಹಕರಿಗೆ ರೂಪಾಯಿ 1,10,000 ಮೌಲ್ಯದ ಚಿನ್ನಾಭರಣವನ್ನು ವಂಚಿಸಿದನು.
ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಇವರು ಆರೋಪಿಯ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಯಾದ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಇವನನ್ನು ಅಪರಾಧಿ ಎಂದು ಘೋಷಿಸಿದರು.
ಇನ್ನು ಕಲಂ.407 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 3 ವರ್ಷಗಳ ಸಾದಾ ಸಜೆ ಮತ್ತು ರೂ.5000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ. ಕಲಂ.420 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 2 ವರ್ಷಗಳ ಸಾದಾ ಸಜೆ ಮತ್ತು ರೂ.5000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿದೆ.




