July 5, 2026

ತಲಪಾಡಿ-ಪೊನ್ನೋಡಿ: ಮಳೆಗೆ ಅಲ್ಲಲ್ಲಿ ಗುಡ್ಡದ ಧರೆ ಕುಸಿತ: ಅಪಾಯದ ಅಂಚಿನಲ್ಲಿವೆ ಮನೆಗಳು, ಪ್ರಾಣಭೀತಿಯಲ್ಲಿ ನಿವಾಸಿಗಳು

0
image_editor_output_image-384895824-1783266238966.jpg

ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ

ಬಂಟ್ವಾಳ, ಜು.5: ಮೂರ್ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ತಲಪಾಡಿ-ಪೊನ್ನೋಡಿ ಸಮೀಪದ ಕೋಡಿಬೆಟ್ಟು ಪ್ರದೇಶದ ಅಲ್ಲಲ್ಲಿ ಧರೆ ಕುಸಿದು ಬಿದ್ದಿದ್ದು, ನಾಲ್ಕು ಮನೆಗಳು ಅಪಾಯದಲ್ಲಿವೆ.

ಬಿ.ಸಿ.ರೋಡ್ ಸಮೀಪದ ತಲಪಾಡಿ-ಕೋಡಿಬೆಟ್ಟು ನಿವಾಸಿಗಳಾದ ಕುಂಞಿ ಬಾವ, ಬಾವಂಞಿ, ಲತೀಫ್ ಎಂಬವರ ಮನೆ ಹಾಗೂ ಬಾಡಿಗೆ ಮನೆಯೊಂದಿದ್ದು, ಇಲ್ಲಿ 10 ಮಕ್ಕಳು ಸೇರಿ 25 ಜನರು ವಾಸಿಸುತ್ತಿದ್ದಾರೆ. ಕಳೆದ ರಾತ್ರಿಯ ಮಳೆಯಿಂದ ಈ ಭಾಗದಲ್ಲಿ ಧರೆ ಕುಸಿದಿದ್ದು, ಇಲ್ಲಿನ ನಿವಾಸಿಗಳು ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಇನ್ನಷ್ಟು ಧರೆ ಕುಸಿತವಾದರೆ ಮನೆಗಳಿಗೆ ಅಪಾಯವಾಗುವ ಸಂಭವವಿದೆ.

ತಡೆಗೋಡೆಯಿಲ್ಲ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಗುಡ್ಡ ಅಗೆದ ಜಾಗದ ಮಣ್ಣು ಹದಗೊಂಡು ಕುಸಿದು ಬಿದ್ದಿದೆ. ಈ ಪ್ರದೇಶದಕ್ಕೆ ಹೊಂದಿಕೊಂದಿರುವ ಗುಡ್ಡವನ್ನು ಅಗೆಯದಂತೆ ಸಂಬಂಧಪಟ್ಟ ಜಾಗದ ಮಾಲಕರಿಗೆ ಮೊದಲೇ ತಿಳಿಸಿದ್ದೆವು. ಆದರೆ, ಇಲ್ಲಿನ ಮನೆ ಮಂದಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ಮತ್ತೆ ಗುಡ್ಡವನ್ನು ಅಗೆಯಲಾಗಿದೆ. ಇದರಿಂದ ಈ ಪ್ರದೇಶವೂ ಸುತ್ತಲು ಗೋಪುರದಂತಾಗಿದೆ. ಗುಡ್ಡ ಅಗೆದ ಬಳಿಕ ತಡೆಗೋಡೆಯನ್ನೂ ನಿರ್ಮಾಣ ಮಾಡಿಲ್ಲ. ಇದಕ್ಕೆ ಬೇಕಾದ ಪೂರಕ ಸ್ಪಂದನೆಯೂ ನಮಗೆ ಸಿಕ್ಕಿಲ್ಲ’ ಎಂದು ಇಲ್ಲಿನ ನಿವಾಸಿ ನಾಸಿರ್ ಕೋಡಿಬೆಟ್ಟು ಆರೋಪಿಸಿದ್ದಾರೆ.
ಇಲ್ಲಿ ಇನ್ನಷ್ಟು ಧರೆ ಕುಸಿಯುವ ಅಪಾಯವಿದ್ದು, ಧರೆ ಕುಸಿದರೆ ಮನೆಗೆ ಹಾನಿಯಾಗುವ ಸಂಭವವಿದೆ. ಆದ್ದರಿಂದ ಇಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ .

ಸುಮಾರು 44 ವರ್ಷಗಳಿಂದ ಈ ಪ್ರದೇಶದಲ್ಲಿ ನೆಲೆಸಿದ್ದೇವೆ. ಇದು ಗುಡ್ಡ ಪ್ರದೇಶವಾಗಿದೆ. ಇಲ್ಲಿನ ಸುತ್ತಲಿನ ಜಾಗದ ಮಾಲಕರು ಗುಡ್ಡ ಜಾಗವನ್ನು ಹಿಟಾಚಿ ಮೂಲಕ ಸಮತಟ್ಟು ಮಾಡಿದ್ದಾರೆ. ನಮ್ಮ ಮನೆಯ ಹತ್ತಿರದಲ್ಲೇ ಗುಡ್ಡವನ್ನು ಅವೈಜ್ಞಾನಿಕವಾಗಿ ಅಗೆಯಲಾಗಿದೆ. ಇದರಿಂದ ಗುಡ್ಡದ ಧರೆ ಅಲ್ಲಲ್ಲಿ ಕುಸಿದು ಬಿದ್ದಿದೆ. ಅದಲ್ಲದೆ ಮನೆಯ ಎದುರಿನ ಮರವೊಂದು ವಾಲಿಕೊಂಡಿದ್ದು, ಇಂದೋ-ನಾಳೆ ಕುಸಿದು ಬೀಳುವ ಸ್ಥಿತಿಯಲ್ಲಿದೆೆ. ಇಲ್ಲಿ ಇನ್ನಷ್ಟು ಧರೆ ಕುಸಿಯುವ ಅಪಾಯವಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.
-ಕುಂಞಿ ಬಾವ, ಕೋಡಿಬೆಟ್ಟು ನಿವಾಸಿ

ಎರಡೂ ಕಡೆಯು ಧರೆ ಕುಸಿತದಿಂದ ಈ ಭಾಗದ ರಸ್ತೆಯೂ ಹದಗೆಟ್ಟಿದೆ. ಮಕ್ಕಳಿಗೆ ಆಟವಾಡಲು ಸ್ಥಳವಕಾಶವೂ ಇಲ್ಲ. ಈ ಭಾಗದ ಮಕ್ಕಳು ಶಾಲೆಗೆ ಆತಂಕದಲ್ಲೇ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ. ಮಕ್ಕಳ ಸುರಕ್ಷತೆಯ ಬಗ್ಗೆಯೂ ಪೋಷಕರಲ್ಲಿ ಭಯ ಹೆಚ್ಚಾಗಿದೆ. ದುರಂತ ಸಂಭವಿಸುವ ಮೊದಲು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.
-ನಾಸಿರ್, ಕೋಡಿಬೆಟ್ಟು ನಿವಾಸಿ

Leave a Reply

Your email address will not be published. Required fields are marked *

You may have missed

error: Content is protected !!