ಕೊಡಂಗಾಯಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಮರ್ಹೂಂ ಶೈಖುನಾ ತ್ವಾಖಾ ಉಸ್ತಾದ್ ಅವರ ಅನುಸ್ಮರಣಾ ಕಾರ್ಯಕ್ರಮ
ವಿಟ್ಲ: ಇತ್ತೀಚೆಗೆ ಅಗಲಿದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಹಾಗೂ ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯರಾಗಿದ್ದ ಮರ್ಹೂಂ ಶೈಖುನಾ ತ್ವಾಖಾ ಉಸ್ತಾದ್ ಅವರ ಅನುಸ್ಮರಣಾ ಕಾರ್ಯಕ್ರಮವನ್ನು ಕೊಡಂಗಾಯಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸಮಿತಿಯ ಕಾರ್ಯಾಲಯದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಗೆ ನೇತೃತ್ವ ವಹಿಸಿ ಮಾತನಾಡಿದ ಇಸ್ಮಾಯಿಲ್ ಅಲ್ ಅಸ್ನವಿ ಅವರು, ಮರ್ಹೂಂ ತ್ವಾಖಾ ಉಸ್ತಾದ್ ಅವರು ದಿಟ್ಟ ನಿಲುವು, ಪಾಂಡಿತ್ಯ ಮತ್ತು ದೂರದೃಷ್ಟಿಯ ನಾಯಕತ್ವದಿಂದ ಜನಮನ ಗೆದ್ದ ಮಹಾನ್ ವಿದ್ವಾಂಸರಾಗಿದ್ದರು. ಸಮಸ್ತ ಸಂಘಟನೆಯ ಮೂಲಕ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಎಂ.ಎ. ಕೊಡಂಗಾಯಿ ಫಾಝಿಲ್ ಹನೀಫಿ ಅವರು, ಮರ್ಹೂಂ ತ್ವಾಖಾ ಉಸ್ತಾದ್ ಅವರು ಖಾಝಿಯಾಗಿ, ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ಹಾಗೂ ಸಮಾಜದ ಮಾರ್ಗದರ್ಶಕರಾಗಿ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರ ನೇತೃತ್ವದಲ್ಲಿ ಬೆಳೆದು ಬಂದ ಶೈಕ್ಷಣಿಕ ಸಂಸ್ಥೆಗಳು ಅವರ ದೂರದೃಷ್ಟಿ ಮತ್ತು ಸೇವಾ ಮನೋಭಾವಕ್ಕೆ ಜೀವಂತ ಸಾಕ್ಷಿಯಾಗಿವೆ. ಅವರ ಆದರ್ಶಮಯ ಬದುಕು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಂಗಾಯಿ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಹನೀಫ್ ಪಿ. ವಹಿಸಿದ್ದರು. ಮುಹಮ್ಮದ್ ಕುಂಞ ಎ ಎಂ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಮೇಲಂಗಡಿ, ಹಾರಿಸ್ ಎಸ್ ಕೆ,ಸಾಬಿತ್ ಎಂ, ಅಝ್ಹರುದ್ದೀನ್,ರಫೀಕ್ ಪಿ,ಅದ್ರಾಮ ಟಿ ಎಂ, ಅಬ್ದುಲ್ಲ ಎಂ, ಅಬೂಬಕರ್ ಎಂ, ಖಾದರ್ ಟಿ ಎಂ, ನಿಷಾದ್,ನೂರುದ್ದೀನ್, ಅಲೀಮುಲ್ಲಾ
ಮೊದಲಾದ ಹಲವಾರು ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಖುರ್‌ಆನ್ ಪಾರಾಯಣ, ತಹ್ಲೀಲ್ ಸಮರ್ಪಣೆ ಹಾಗೂ ವಿಶೇಷ ದುಆ ನಡೆಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಇಬ್ರಾಹಿಂ ಝೈನಿ ಸ್ವಾಗತಿಸಿ, ಕೊನೆಯಲ್ಲಿ ಕಾರ್ಯದರ್ಶಿ ಟಿ.ಎಂ. ಅಬ್ದುಲ್ ಮಜೀದ್ ವಂದಿಸಿದರು.




