ನರಹರಿ ಪರ್ವತದ ಬಳಿ ಭೀಕರ ಅಪಘಾತ: ಪುತ್ತೂರಿನ ಅಶೋಕ್ ಮೃತ್ಯು
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್–ಕಲ್ಲಡ್ಕ ನಡುವಿನ ನರಹರಿ ಪರ್ವತದ ಮುಂಭಾಗದಲ್ಲಿ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ.
ಮೃತರನ್ನು ಪುತ್ತೂರು ನಿವಾಸಿ ಅಶೋಕ್ (34) ಎಂದು ಗುರುತಿಸಲಾಗಿದೆ.
ಬಿ.ಸಿ. ರೋಡ್ ಕಡೆಗೆ ತನ್ನ ಹಾದಿಯಲ್ಲಿ ಸಂಚರಿಸುತ್ತಿದ್ದ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು (ನೋಂದಣಿ ಸಂಖ್ಯೆ: KA-21-C-4128)ಗೆ, ವಿರುದ್ಧ ದಿಕ್ಕಿನಿಂದ ಒನ್‌ವೇ ನಿಯಮ ಉಲ್ಲಂಘಿಸಿ ರಾಂಗ್ ಸೈಡ್‌ನಲ್ಲಿ ಬಂದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಹೆದ್ದಾರಿಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇದ್ದರೂ, ಬೈಕ್ ಸವಾರ ನಿಯಮ ಉಲ್ಲಂಘಿಸಿ ಸಂಚರಿಸಿದ್ದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಮಾರುತಿ ಕಾರಿನ ಮುಂಭಾಗದ ಬಾನೆಟ್, ಗ್ರಿಲ್ ಹಾಗೂ ಇಂಜಿನ್ ಭಾಗ ಸಂಪೂರ್ಣ ಜಜ್ಜುಗುಜ್ಜಾಗಿದ್ದು, ಮುಂಭಾಗದ ವಿಂಡ್‌ಶೀಲ್ಡ್ ಗಾಜು ಪುಡಿಯಾಗಿದೆ. ಬೈಕ್‌ನ ಮುಂಭಾಗವೂ ಸಂಪೂರ್ಣ ನುಚ್ಚುನೂರಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶೋಕ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಸಂಬಂಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.




