February 4, 2026

ಡಬಲ್ ಇಂಜಿನ್ ಸರ್ಕಾರದಲ್ಲಿ ಬರೀ ಹೊಗೆ ಮಾತ್ರ ಬಂತು: ಡಿ.ಕೆ. ಶಿವಕುಮಾರ್ ವ್ಯಂಗ್ಯ

0
IMG-20230216-WA0019.jpg

ಮೈಸೂರು: ಡಬಲ್ ಇಂಜಿನ್ ಸರ್ಕಾರ ವೇಗವಾಗಿ ರಾಜ್ಯದ ಅಭಿವೃದ್ಧಿ ಮಾಡಲಿದೆ ಎಂದು ಭಾವಿಸಿದ್ದೆವು. ಆದರೆ ಈ ಇಂಜಿನ್ ಆರಂಭವಾಯಿತೇ ಹೊರತು, ಮುಂದಕ್ಕೆ ಹೋಗಲೇ ಇಲ್ಲ. ಬರೀ ಹೊಗೆ ಮಾತ್ರ ಬಂತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಬೆಳಗ್ಗೆ ಸರ್ಕಾರ ಬಜೆಟ್ ಮಂಡನೆ ಮಾಡುತ್ತಿದ್ದು, ಇದು ಈ ಸರ್ಕಾರದ ಕೊನೆ ಬಜೆಟ್ ಹಾಗೂ ಪ್ರಣಾಳಿಕಾ ಬಜೆಟ್ ಆಗಿದೆ. ಈ ಸರ್ಕಾರ ಕಳೆದ ವರ್ಷ ಮಾಡಿದ ಬಜೆಟ್ ಕೇವಲ ಘೋಷಣೆ, ಭರವಸೆ, ಭಾಷಣಕ್ಕೆ ಸೀಮಿತವಾಗಿತ್ತು.

ಕಳೆದ ವರ್ಷದ ಬಜೆಟ್ ಪುಸ್ತಕ ತೆಗೆದುನೋಡಿ. ಅದರಲ್ಲಿ ಜನರಿಗೆ ಕೊಟ್ಟ ಮಾತಿನಲ್ಲಿ ಎಷ್ಟು ಅನುಷ್ಠಾನಕ್ಕೆ ತಂದಿದ್ದಾರೆ ಎಂಬುದನ್ನು ವಿಶ್ಲೇಷಣೆ ಮಾಡಿ. ಬೊಮ್ಮಾಯಿ ಅವರು ಹೊಸ ಬಜೆಟ್ ಮಂಡಿಸುವ ಮುನ್ನ ಕಳೆದ ವರ್ಷದ ಬಜೆಟ್ ಜಾರಿ ಕುರಿತು ಇಂದು ಸಂಜೆ ಒಳಗಾಗಿ ರಿಪೋರ್ಟ್ ಕಾರ್ಡ್ ನೀಡಬೇಕು. ಆ ಮೂಲಕ ಎಷ್ಟರ ಮಟ್ಟಿಗೆ ನುಡಿದಂತೆ ನಡೆದಿದ್ದಾರೆ ಎಂದು ತಿಳಿಸಬೇಕು. ಈ ಸರ್ಕಾರ ಮೂರು ಬಜೆಟ್ ಮಂಡನೆ ಮಾಡಿದ್ದು, ಯಾವುದನ್ನೂ ಸರಿಯಾಗಿ ಜಾರಿ ಮಾಡಿಲ್ಲ. ಅದಕ್ಕೆ ಕಾರಣವೇನು? ನಿಮ್ಮ ಬಳಿ ಅಧಿಕಾರ ಇಲ್ಲವೇ? ಆಡಳಿತ ಯಂತ್ರ ಇಲ್ಲವೇ? ಮಂತ್ರಿಗಳು ಕೆಲಸ ಮಾಡುತ್ತಿಲ್ಲವೇ? ಅಧಿಕಾರಿಗಳು ಸ್ಪಂದಿಸುತ್ತಿಲ್ಲವೇ? ಶಾಸಕರ ಜಂಜಾಟದಲ್ಲಿ ರಾಜ್ಯ ಮುನ್ನಡೆಸಲು ಆಗುತ್ತಿಲ್ಲವೇ? ಈ ವಿಚಾರವಾಗಿ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಾವು ಬಜೆಟ್ ವಿಚಾರದಲ್ಲಿ ಸುಳ್ಳು ಆರೋಪ ಮಾಡಲು ಸಾಧ್ಯವಿಲ್ಲ. 2018 ರ ಬಿಜೆಪಿ ಪ್ರಣಾಳಿಕೆಯಲ್ಲಿ ಶೇ.91ರಷ್ಟು ಈಡೇರಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರೈತರ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಗಳಲ್ಲಿ 1 ಲಕ್ಷ ವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಯಡಿಯೂರಪ್ಪನವರೇ, ರೈತರ ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿ ಯಾಕೆ ಮೋಸ ಮಾಡಿದ್ದೀರಿ. ಇನ್ನು ರೈತರಿಗೆ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿ ಅದನ್ನು ಈಡೇರಿಸಿಲ್ಲ ಯಾಕೆ? ಇನ್ನು ರೈತ ಬಂಧು ನಿಧಿ ಸ್ಥಾಪಿಸುವುದಾಗಿ ಹೇಳಿದ್ದಿರಿ. ರೈತರ ಪಂಪ್ ಸೆಟ್ ಗಳಿಗೆ 10 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡುವ ಭರವಸೆ ನೀಡಿದ್ದಿರಿ. ಯಾಕೆ ನೀಡಿಲ್ಲ? ನಾವು ಉಚಿತ ವಿದ್ಯುತ್ ನೀಡುತ್ತೇವೆ ಎಂದಾಗ ಪ್ರಶ್ನಿಸುವ ಸಚಿವ ಸುನೀಲ್, ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪನವರೇ ನೀವು ಯಾಕೆ ಈ ಭರವಸೆ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!