ಕಡಬ: ತೂಕ ಹೆಚ್ಚಿಸಿ ಬ್ಯಾಂಕ್ ನಲ್ಲಿ ಚಿನ್ನ ಅಡವಿಡಲು ಯತ್ನ: ಉಪ್ಪಿನಂಗಡಿ ಮತ್ತು ಬಂಟ್ವಾಳದ ಇಬ್ಬರ ಬಂಧನ
ಕಡಬ: ತೂಕ ಹೆಚ್ಚಿಸಿ ಚಿನ್ನಾಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ವಂಚಿಸಲು ಯತ್ನಿಸುತ್ತಿದ್ದ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಕಡಬ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಗಳನ್ನು ಉಪ್ಪಿನಂಗಡಿಯ ಮಹಮ್ಮದ್ ಫಾಯಿಝ್ (20) ಮತ್ತು ಬಂಟ್ವಾಳ ಕಸಬಾದ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ.
ವರದಿಯ ಪ್ರಕಾರ, ಜುಲೈ 3ರ ಶುಕ್ರವಾರದಂದು ಸಂಜೆ ಕಡಬ ಪೇಟೆಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸುಮಾರು 120 ಗ್ರಾಂ ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡವಿಡಲು ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ಆಭರಣಗಳ ಬಗ್ಗೆ ಯಾವುದೇ ದಾಖಲೆ ಇಲ್ಲದ ಕಾರಣ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಆಭರಣಗಳು ಹೆಚ್ಚು ತೂಕ ಬರುವಂತೆ ಮಾಡಿ ಬ್ಯಾಂಕ್‌ಗೆ ಮೋಸ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎನ್ನಲಾಗಿದೆ.




