ತಮಿಳುನಾಡಿನಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ: 21 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ
ಚೆನ್ನೈ: ತಮಿಳುನಾಡಿನಲ್ಲಿ ಬುಧವಾರವೂ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಚೆನ್ನೈ ನಗರವೊಂದರಲ್ಲೇ 2 ಸೆಂ.ಮೀ ಮಳೆಯಾಗಿದೆ.
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ರಾಣಿಪೇಟ್, ದಿಂಡುಗಲ್, ಪುದುಕೊಟ್ಟೈ, ತೇಣಿ, ವೆಲ್ಲೂರು, ಅರಿಯಲ್ಲೂರು, ನಾಗಪಟ್ಟಣಂ, ವಿಲ್ಲುಪುರ, ತಿರುವಾರೂರ್, ಮೈಲಾಡುಧುರೈ, ಕಲ್ಲಕುರಿಚಿ, ಕಡಲೂರು, ವಿಲ್ಲಿಪುರಂ, ತಂಜಾವೂರು ಮತ್ತು ಧರ್ಮಪುರಿಯಲ್ಲಿ ಶಾಲಾ- ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ಸೇಲಂ, ತಿರುಚ್ಚಿ ಮತ್ತು ತಿರುವನಾಮಲೈನಲ್ಲಿ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ತಮಿಳುನಾಡಿನ ಕೆಲವು ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಚೆನ್ನೈನಲ್ಲಿ ಮಳೆ ಸುರಿಯುತ್ತಿದೆ. ಚೆನ್ನೈ ಮತ್ತು ಪಕ್ಕದ ಜಿಲ್ಲೆಗಳು ಜಲಾವೃತವಾಗಿದೆ. ರಾಜ್ಯದಾದ್ಯಂತ ಅನೇಕ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.
ತಮಿಳುನಾಡಿನಲ್ಲಿ 800ಕ್ಕೂ ಹೆಚ್ಚು ಜನರನ್ನು ಚೆನ್ನೈನ ಪರಿಹಾರ ಶಿಬಿರಗಳಿಗೆ ಶಿಫ್ಟ್ ಮಾಡಲಾಗಿದೆ. ಚೆನ್ನೈನ 16ಕ್ಕೂ ಹೆಚ್ಚು ಏರಿಯಾದ ರಸ್ತೆಗಳು ಜಲಾವೃತವಾಗಿದ್ದು, ಚೆನ್ನೈನಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿರುವುದರಿಂದ ಸ್ಥಳೀಯರಿಗೆ ಸುರಕ್ಷಿತ ಪ್ರದೇಶಗಳಲ್ಲಿರಲು ಎಚ್ಚರಿಕೆ ನೀಡಲಾಗಿದೆ.





