ಕೇಂದ್ರ ಸರ್ಕಾರ ಉಗ್ರಗಾಮಿಗಳ ಹೆಸರಿನಲ್ಲಿ ಕಾಶ್ಮೀರದ ನಾಗರಿಕರನ್ನು ಕೊಲ್ಲುತ್ತಿದೆ: ಮೆಹಬೂಬಾ ಮುಫ್ತಿ
ಹೊಸದಿಲ್ಲಿ: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ಮತ್ತೆ ಗೃಹಬಂಧನಕ್ಕೆ ಒಳಪಡಿಸಲಾಗಿದೆ. ಬುಧವಾರ ಶ್ರೀನಗರದಲ್ಲಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.
ಮೆಹಬೂಬಾ ಮುಫ್ತಿ ಅವರು ಹೈದರಾಪೊರಾ ಎನ್ ಕೌಂಟರ್ ವಿರುದ್ಧ ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಿದ್ದರು. ನಂತರ ಅವರು ಇದೇ ವಿಚಾರಕ್ಕೆ ಸಂಬಂಧಿಸಿ ಶ್ರೀನಗರದ ಪ್ರೆಸ್ ಕಾಲೊನಿಯಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದರು. ಈ ಕಾರಣದಿಂದ ಅವರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
“ಈ ಸರ್ಕಾರವು ಉಗ್ರಗಾಮಿಗಳ ಹೆಸರಿನಲ್ಲಿ ನಾಗರಿಕರನ್ನು ಕೊಲ್ಲುವ ಕಾರಣದಿಂದ ನಾನು ಪ್ರತಿಭಟನೆ ನಡೆಸುತ್ತಿದ್ದೇನೆ. ಉಗ್ರಗಾಮಿಗಳನ್ನು ಕೊಲ್ಲುತ್ತಿದ್ದಾರೆಯೇ ಎಂದು ಯಾರಿಗೂ ತಿಳಿದಿಲ್ಲ. ಇತ್ತೀಚೆಗೆ ಮೂವರು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಬೇಡಿಕೆಯ ಹೊರತಾಗಿಯೂ ನಾಗರಿಕರ ಮೃತ ದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲು ಸರ್ಕಾರ ನಿರಾಕರಿಸಿದೆ” ಎಂದು ಮುಫ್ತಿ ಹೇಳಿದ್ದಾರೆ.





