ಖ್ಯಾತ ಮುಸ್ಲಿಮ್ ವಿದ್ವಾಂಸ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್‌ರ ಆರೋಗ್ಯ ವಿಚಾರಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್
ಕೋಝಿಕ್ಕೋಡ್: ಖ್ಯಾತ ಮುಸ್ಲಿಮ್ ವಿದ್ವಾಂಸ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ದೇಶಾದ್ಯಂತ ಹಲವಾರು ಧಾರ್ಮಿಕ, ಶೈಕ್ಷಣಿಕ, ಸಂಘಟನಾ ಚಳುಳಿಗಳ ರೂವಾರಿಯಾಗಿರುವ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು ವಯೋಸಹಜ ಅನಾರೋಗ್ಯದಿಂದಾಗಿ ಚಿಕಿತ್ಸೆಯ ಬಳಿಕ ವಿಶ್ರಾಂತಿಯಲ್ಲಿದ್ದಾರೆ.
ಕೇರಳದ ಕಲ್ಲಿಕೋಟೆಯ ಜಾಮಿಅಃ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಾ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಮರ್ಕಝ್ ನಾಲೆಡ್ಜ್ ಸಿಟಿಯ ಸ್ಥಾಪಕರಾಗಿರುವ ಕಾಂತಪುರಂ ಉಸ್ತಾದರು ವಿದೇಶಗಳಲ್ಲಿ ನಡೆಯುವ ಹಲವಾರು ಇಸ್ಲಾಮಿಕ್ ಕಾರ್ಯಕ್ರಮಗಳಿಗೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ವಿಶ್ರಾಂತಿಯಲ್ಲಿರುವ ಎ.ಪಿ ಉಸ್ತಾದರನ್ನು ಹಲವಾರು ಜಾಗತಿಕ ನಾಯಕರು ಭೇಟಿಯಾಗಲು ಕೇರಳಕ್ಕೆ ಆಗಮಿಸುತ್ತಿದ್ದಾರೆ.
ಶುಕ್ರವಾರ ಕೇರಳಕ್ಕೆ ಆಗಮಿಸಿದ್ದ ಬಾಗ್ದಾದ್’ನ ಖ್ಯಾತ ವಿದ್ವಾಂಸ ಶೈಖ್ ಅಫೀಫುದ್ದೀನ್ ಜೀಲಾನಿಯವರು ಕಾಂತಪುರಂ ಉಸ್ತಾದರನ್ನು ಭೇಟಿ ಮಾಡಿದ್ದು, ಜುಮುಆ ಖುತುಬಾ, ನಮಾಝ್ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು.




