ರಾಜ್ಯಮಟ್ಟದ ಹೋರಿ ಸ್ಪರ್ಧೆಯಲ್ಲಿ ಕೊಬ್ಬರಿ ಹೋರಿ ತಿವಿದು ಯುವಕ ಸಾವು: 10ಕ್ಕೂ ಅಧಿಕ ಜನರು ಗಾಯ
ಹಾವೇರಿ: ರಾಜ್ಯಮಟ್ಟದ ಹೋರಿ ಸ್ಪರ್ಧೆ ನಡೆಯುತ್ತಿದ್ದ ವೇಳೆ ಕೊಬ್ಬರಿ ಹೋರಿ ತಿವಿದು ಯುವಕನೊಬ್ಬ ಸಾವನ್ನಪ್ಪಿದ್ದು, 10 ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಮಂಜುನಾಥ್ ಚಳ್ಳಕ್ಕನವರ (27) ಎಂದು ಗುರುತಿಸಲಾಗಿದೆ. ಮಂಜುನಾಥ್ ಸಂಗೂರು ಗ್ರಾಮದ ನಿವಾಸಿಯಾಗಿದ್ದು, ರಾಜ್ಯಮಟ್ಟದ ಹೋರಿ ಹಬ್ಬವನ್ನು ವೀಕ್ಷಿಸಲು ತೆರಳಿದ್ದ.
ಹೋರಿ ಹಬ್ಬವನ್ನು ನೋಡುತ್ತಿದ್ದ ವೇಳೆ ಹೋರಿ ತಿವಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ 6 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.




