ವ್ಯಾನ್‌ನಿಂದ ಜಿಗಿದು ಅಪಹರಣಕಾರರ ಕೈಗೆ ಕಚ್ಚಿ ತಪ್ಪಿಸಿಕೊಂಡ 11ರ ಬಾಲಕ
ಗಾಜಿಯಾಬಾದ್: ಗಾಜಿಯಾಬಾದ್‌ನಲ್ಲಿ ಬಾಲಕನೊಬ್ಬ ತನ್ನನ್ನು ಅಪಹರಿಸಿದವರ ಕೈಗೆ ಕಚ್ಚಿ ವ್ಯಾನ್‌ನಿಂದ ಜಿಗಿದು ಪಾರಾದ ಘಟನೆ ನಡೆದಿದೆ.
ಗಾಜಿಯಾಬಾದ್‌ನ ಮುರಾದ್‌ನಗರದ ನಿವಾಸಿ ಆರವ್ ರಾಠಿ ಎಂಬ ಬಾಲಕ ಶನಿವಾರ ಸಂಜೆ ತರಕಾರಿ ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದಾಗ ನಾಲ್ವರ ತಂಡ ವ್ಯಾನ್‌ನಲ್ಲಿ ಬಂದು ಬಾಲಕನಿಗೆ ಚಾಕು ತೋರಿಸಿ ಆತನನ್ನು ಅಪಹರಿಸಿತ್ತು. ಅಲ್ಲದೆ ವಾಹನವನ್ನು ಸ್ವಲ್ಪ ಮುಂದೆ ನಿಲ್ಲಿಸಿ ಆತನನ್ನು ವಿವಸ್ತ್ರಗೊಳಿಸಿ ಆತನ ಸೈಕಲ್‌ನ್ನು ಎಸೆದಿದ್ದಾರೆ. ಈ ವೇಳೆ ಬಾಲಕ ಅಪಹರಣಕಾರರ ಕೈಗೆ ಕಚ್ಚಿ ವ್ಯಾನ್‌ನಿಂದ ಜಿಗಿದು ತಪ್ಪಿಸಿಕೊಂಡಿದ್ದಾನೆ.
ಸುಮಾರು ಎರಡು ಕಿಲೋ ಮೀಟರ್‌ವರೆಗೆ ಓಡಿ ಹೋಗಿ ಬಾಲಕ ಮನೆ ಸೇರಿಕೊಂಡು ಬಳಿಕ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಬಾಲಕನ ತಂದೆ ಗಾಜಿಯಾಬಾದ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದು, ಸಾರ್ವಜನಿಕರು ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಬಳಿಕ ಕೇಸು ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.