ಮುಹಮ್ಮದ್ ರಂಜಾನ್ ಲಾಕಪ್ ಡೆತ್ ಪ್ರಕರಣ:
25 ವರ್ಷಗಳ ಹಿಂದಿನ ಪ್ರಕರಣವನ್ನು ಮರು ತನಿಖೆಗೆ ಕೋರ್ಟ್ ಆದೇಶ
ಶ್ರೀನಗರ: 25 ವರ್ಷಗಳ ಹಿಂದೆ ಘಟಿಸಿದ ಲಾಕಪ್ ಡೆತ್ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ.
ಖಾನ್ಯಾರ್‌ನ ಮಿಸ್ಕಿನ್ ಬಾಗ್‌ನ ಜಮೀಲಾ ಬೇಗಂ ಅವರು ತನ್ನ ಪತಿಯನ್ನು ಕೊಂದವರಿಗೆ ಶಿಕ್ಷೆಯಾಗಲೇಬೇಕೆಂದು ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ.
“ನನ್ನ ಪತಿಯ ದೇಹವನ್ನು ನಮಗೆ ಅಂತ್ಯಸಂಸ್ಕಾರಕ್ಕೆ ಹಸ್ತಾಂತರಿಸಿದ ಬಳಿಕ, ನನ್ನ ಚಿಕ್ಕ ಮಕ್ಕಳು ತಂದೆಯ ಶವವನ್ನು ನೋಡಿದರು. ಘುಸುಲ್ (ಅಂತ್ಯ ಸಂಸ್ಕಾರದ ಮೊದಲು ಶವವನ್ನು ತೊಳೆಯುವ ಇಸ್ಲಾಮಿಕ್ ಆಚರಣೆ) ನಡೆಸಿದಾಗ, ನನ್ನ ಪತಿಗೆ ನ್ಯಾಯ ಸಿಗುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ ಎಂದು ಅವರ ದೇಹದ ಮುಂದೆ ಪ್ರತಿಜ್ಞೆ ಮಾಡಿದ್ದೇನೆ” ಎಂದು ಜಮೀಲಾ ಬೇಗಂ ಹೇಳುತ್ತಾರೆ.
ತಮ್ಮ ಪ್ರೀತಿಪಾತ್ರರು ಕೊಲ್ಲಲ್ಪಟ್ಟಾಗ ಹೆಚ್ಚಿನ ಕಾಶ್ಮೀರಿಗಳು ಪ್ರತೀಕಾರದ ಭಯದಿಂದ ಮೌನವಾಗಿರುತ್ತಾರೆ. ಆದರೆ ಜಮೀಲಾ ಮತ್ತೆ ಹೋರಾಡಲು ನಿರ್ಧರಿಸಿದರು ಎಂದು ದಿ ವೈರ್ ವರದಿ ಮಾಡಿದೆ.
1996ರ ಮೇ 31ರಿಂದ ಜೂನ್ 1ರ ಅವಧಿಯಲ್ಲಿ ಜಮೀಲಾ ಅವರ ಪತಿ ಮುಹಮ್ಮದ್ ರಂಜಾನ್ ಅವರನ್ನು ಪೊಲೀಸರು ಕೊಂದರು ಎಂದು ಆರೋಪಿಸಲಾಗಿದೆ. ರಂಜಾನ್ ಅವರನ್ನು ಉಗ್ರಗಾಮಿ ಎಂದು ಆರೋಪಿಸಲಾಗಿದೆ.
ಮಿಸ್ಕಿನ್ ಬಾಗ್‌ನ ಅಡಗುತಾಣದಲ್ಲಿ ಅಡಗಿದ್ದ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡು ಹಾರಿಸಿದ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ರಂಜಾನ್ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು.
“ನನ್ನ ಪತಿಗೆ ನ್ಯಾಯ ದೊರಕಿಸಿಕೊಡಲು ಎಲ್ಲ ಬಾಗಿಲುಗಳನ್ನು ತಟ್ಟಿದೆ. ಫಾರೂಕ್ ಅಬ್ದುಲ್ಲಾ, ಮುಫ್ತಿ ಮುಹಮ್ಮದ್ ಸಯೀದ್ ಮತ್ತು ಅಲಿ ಮುಹಮ್ಮದ್ ಸಾಗರ್ ಅವರಂತಹ ರಾಜಕಾರಣಿಗಳನ್ನು ನಾನು ಭೇಟಿ ಮಾಡಿದ್ದೇನೆ. ಪ್ರಕರಣದ ತನಿಖೆಗೆ, ನನ್ನ ಪತಿ ಹತ್ಯೆಯಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸಬೇಕೆಂದು ಹಲವಾರು ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಅವರು ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಜಮೀಲಾ ಬೇಗಂ ಹೇಳುತ್ತಾರೆ.





