ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಏಕಾಏಕಿ ಅಸ್ವಸ್ಥರಾದ ಸಚಿವ ನಿತಿನ್ ಗಡ್ಕರಿ: ವೈದ್ಯರಿಂದ ತಪಾಸಣೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಏಕಾಏಕಿ ಅಸ್ವಸ್ಥರಾದ ಘಟನೆ ನಡೆದಿದೆ.
ಸಿಲಿಗುರಿಯ ರಾಷ್ಟ್ರೀಯ ಹೆದ್ದಾರಿಯ 10ರ ಉದ್ದಕ್ಕೂ ಉದ್ದೇಶಿತ 13 ಕಿಮೀ ನಾಲ್ಕು-ಲೇನ್ ಎಲಿವೇಟೆಡ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಉದ್ಘಾಟಿಸಲು ಗಡ್ಕರಿಯವರು ಆಗಮಿಸಿದ್ದು, ಈ ವೇಳೆ ಏಕಾಏಕಿ ಅವರು ಅಸ್ವಸ್ಥರಾಗಿದ್ದು, ತಕ್ಷಣ ವೈದ್ಯರು ಸ್ಥಳಕ್ಕಾಗಮಿಸಿ ಸಚಿವರನ್ನು ತಪಾಸಣೆ ನಡೆಸಿದ್ದಾರೆ.
ಇನ್ನು ಗಡ್ಕರಿಯವರ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಹಠಾತ್ ಕುಸಿತವಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ವೈದ್ಯರು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದು, ಅವರು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.





