ಎಸ್‌ಡಿಪಿಐ ವಿರುದ್ದ ಅವಹೇಳನಕಾರಿ ಸುದ್ದಿ ಪ್ರಕಟ – ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್‌ರವರಿಗೆ ಜಾಮೀನು ರಹಿತ ವಾರೆಂಟ್..!
ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಕಟಿಸಿದ ಪ್ರಕರಣದಲ್ಲಿ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್‌ರವರಿಗೆ ಮೈಸೂರಿನ ಜೆಎಂಎಫ್‌ಸಿ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದೆ ಎಂದು ವರದಿಯಾಗಿದೆ.
ಪ್ರಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮೇಲೆ ಎನ್‌ಐಎ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಎಸ್‌ಡಿಪಿಐ ಪಕ್ಷದ ಮೇಲೆಯೂ ಸುವರ್ಣ ನ್ಯೂಸ್ ಆಧಾರ ರಹಿತ ಸುದ್ದಿ ಪ್ರಸಾರ ಮಾಡಿದೆ ಎಂದು ಆರೋಪಿಸಿ ಮೈಸೂರಿನಲ್ಲಿ ಚಾನೆಲ್ ಸಂಪಾದಕರಾದ ರವಿ ಹೆಗ್ಡೆ ಮತ್ತು ಅಜಿತ್ ಹನುಮಕ್ಕನವರ್ ವಿರುದ್ಧ ದೂರು ದಾಖಲಾಗಿತ್ತು.
ರವಿ ಹೆಗ್ಡೆ ಮತ್ತು ಅಜಿತ್ ಹನುಮಕ್ಕನವರ್ ನ್ಯಾಯಾಲಯಕ್ಕೆ ಹಾಜರಾಗದ ಈ ಹಿನ್ನೆಲೆಯಲ್ಲಿ ದೂರುದಾರರ ಪರ ವಕೀಲರು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸುವಂತೆ ಕೋರಿ ಮೆಮೊ ಸಲ್ಲಿಸಿದ್ದು, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿದೆ.





