August 12, 2026

ಶಾಲಾ ಬಸ್‌ನಿಂದ ಇಳಿದ ಅಣ್ಣನನ್ನು ನೋಡಲು ಖುಷಿಯಿಂದ ಓಡಿ ಬಂದ 3 ವರ್ಷದ ಬಾಲಕಿ ಬಸ್ಸಿನ ಅಡಿಗೆ ಬಿದ್ದು ದಾರುಣ ಅಂತ್ಯ

0
IMG-20260812-WA0036

ವಿಜಯಪುರ: ಶಾಲಾ ಬಸ್‌ನಿಂದ ಇಳಿದ ಅಣ್ಣನನ್ನು ನೋಡಲು ಖುಷಿಯಿಂದ ಓಡಿ ಬಂದ ಮೂರು ವರ್ಷದ ಬಾಲಕಿಯೊಬ್ಬಳು, ಅದೇ ಬಸ್‌ನ ಚಕ್ರಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ನಗರದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ಮೃತ ಬಾಲಕಿಯನ್ನು ಶಿಫಾ ಸುಹಾಸ ವಾಡಿ (3) ಎಂದು ಗುರುತಿಸಲಾಗಿದೆ.

ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿಯ ಅಣ್ಣ ಸಂಜೆ ಶಾಲಾ ಬಸ್‌ನಲ್ಲಿ ಮನೆಗೆ ಮರಳಿದ್ದ. ಬಸ್‌ನಿಂದ ಕೆಳಗಿಳಿದ ಅಣ್ಣನನ್ನು ಕಂಡು ಬಾಲಕಿ ಶಿಫಾ ಮನೆಯಿಂದ ಹೊರಗೆ ಬಂದಿದ್ದಾಳೆ. ಬಸ್‌ನ ಮುಂಭಾಗದಿಂದ ಅಣ್ಣನ ಬಳಿಗೆ ತೆರಳುತ್ತಿದ್ದಾಗ, ಮುಂಭಾಗದಲ್ಲಿದ್ದ ಮಗುವನ್ನು ಗಮನಿಸದ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದಾನೆ.

ಪರಿಣಾಮ ಬಸ್‌ನ ಮುಂಭಾಗದ ಚಕ್ರ ಬಾಲಕಿಯ ಮೇಲೆ ಹರಿದಿದ್ದು, ತೀವ್ರವಾಗಿ ಗಾಯಗೊಂಡ ಶಿಫಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಕಣ್ಣೆದುರೇ ಮಗು ಪ್ರಾಣ ಕಳೆದುಕೊಂಡಿದ್ದನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣನಾದ ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!