December 15, 2025

ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವ ವಿಚಾರವನ್ನು ಉಗ್ರ ಸಂಘಟನೆ ಜೊತೆಗೆ ತಳುಕು ಹಾಕಿ ಪ್ರಸಾರ: ‘ನ್ಯೂಸ್‌ 18 ಇಂಡಿಯಾ’ ವಾಹಿನಿಗೆ 50,000 ರೂ. ದಂಡ

0
Screenshot_2022-10-27-10-58-51-69_680d03679600f7af0b4c700c6b270fe7.jpg

ನವದೆಹಲಿ: ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವ ವಿಚಾರದ ಚರ್ಚೆಯನ್ನು ಕೋಮು ವಿಚಾರವನ್ನಾಗಿ ಮಾರ್ಪಡಿಸಿದ್ದಕ್ಕೆ ಮತ್ತು ಅಲ್‌ ಕೈದಾ ಉಗ್ರ ಸಂಘಟನೆ ಜೊತೆಗೆ ತಳುಕು ಹಾಕಿದ್ದಕ್ಕಾಗಿ ಸುದ್ದಿ ವಾಹಿನಿಯೊಂದಕ್ಕೆ ದಂಡ ವಿಧಿಸಲಾಗಿದೆ.

ಭಾರತೀಯ ಸುದ್ದಿ ಪ್ರಸಾರಣ ಮತ್ತು ಡಿಜಿಟಲ್‌ ಸ್ಟಾಂಡರ್ಡ್‌ ಪ್ರಾಧಿಕಾರ (ಎನ್‌ಬಿಡಿಎಸ್‌ಎ)ವು ಈ ಕ್ರಮ ಕೈಗೊಂಡಿದೆ.

ಹಿಜಾಬ್‌ ಧರಿಸುವುದನ್ನು ಬೆಂಬಲಿಸಿ ಮಾತನಾಡುತ್ತಿದ್ದವರನ್ನು ಮತ್ತು ವಿದ್ಯಾರ್ಥಿಗಳನ್ನು ಉಗ್ರ ಅಯಮಾನ್‌ ಅಲ್‌ ಜವಾಹಿರಿ ಜೊತೆಗೆ ಸಂಬಂಧವನ್ನು ಕಲ್ಪಿಸಿದ್ದನ್ನು ಖಂಡಿಸಿರುವ ಎನ್‌ಬಿಡಿಎಸ್‌ಎ ‘ನ್ಯೂಸ್‌ 18 ಇಂಡಿಯಾ’ ವಾಹಿನಿಗೆ ₹50,000 ದಂಡವನ್ನು ವಿಧಿಸಿದೆ.

ಏಪ್ರಿಲ್‌ 6ರಂದು ಪ್ರಸಾರಗೊಂಡ ಚರ್ಚೆ ಕಾರ್ಯಕ್ರಮದಲ್ಲಿ ಹಿಜಾಬ್‌ ಪರ ಮಾತನಾಡುತ್ತಿದ್ದವರನ್ನು ‘ನೀವು ಜವಾಹಿರಿ ಗ್ಯಾಂಗ್‌ ಸದಸ್ಯರು’, ‘ನೀವು ಜವಾಹಿರಿಯ ಅಂಬಾಸಡರ್‌ಗಳು’ , ‘ಜವಾಹಿರಿ ನಿಮ್ಮ ದೇವರು, ನೀವು ಅವರ ಬೆಂಬಲಿಗರು’ ಎಂಬೆಲ್ಲ ಉಲ್ಲೇಖಗಳನ್ನು ಮಾಡುವ ಮೂಲಕ ಕಾನೂನು ಉಲ್ಲಂಘಿಸಲಾಗಿದೆ ಎಂದು ಆದೇಶ ನೀಡಿದ ಎನ್‌ಬಿಡಿಎಸ್‌ಎ ಮುಖ್ಯಸ್ಥ, ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಹೇಳಿದ್ದಾರೆ.

ಚರ್ಚೆಯಲ್ಲಿ ಪಾಲ್ಗೊಂಡವರನ್ನು ಮತ್ತು ವಿದ್ಯಾರ್ಥಿಗಳನ್ನು ಉಗ್ರ ಜವಾಹಿರಿ ಜೊತೆಗೆ ಸಂಬಂಧ ಕಲ್ಪಿಸಿದ್ದಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ ಎಂದು ಎನ್‌ಬಿಡಿಎಸ್‌ಎ ಹೇಳಿದೆ.

ಹಿಜಾಬ್‌ಗೆ ಸಂಬಂಧಿಸಿದ ಈ ಚರ್ಚೆಯ ಕಾರ್ಯಕ್ರಮವನ್ನು ಅಲ್‌ ಕೈದಾ ಗ್ಯಾಂಗ್‌ ಎಕ್ಸ್‌ಪೋಸ್ಡ್‌, ಹಿಜಾಬ್‌ ಕಾ ಫಟಾ ಪೋಸ್ಟರ್‌, ನಿಕ್ಲಾ ಅಲ್‌ ಕೈದಾ, ಹಿಜಾಬ್‌ ಹಿಂದೆ ಅಲ್‌ ಜವಾಹಿರಿ, ಹಿಜಾಬ್‌ ಸಂಘರ್ಷವನ್ನು ಹುಟ್ಟುಹಾಕಿದ್ದು ಅಲ್‌ ಕೈದಾ ಎಂದೆಲ್ಲ ಉಲ್ಲೇಖಿಸಿ ಪ್ರಚಾರ ಮಾಡಲಾಗಿತ್ತು.

ಹಿಜಾಬ್ ಧರಿಸಿ ತರಗತಿಗಳನ್ನು ಪ್ರವೇಶಿಸಲು ಅವಕಾಶ ನೀಡುವಂತೆ ಉಡುಪಿಯ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಪಟ್ಟು ಹಿಡಿದಿದ್ದು ಬಳಿಕ ಹಿಜಾಬ್‌ ಸಂಘರ್ಷವಾಗಿ ದೇಶದೆಲ್ಲೆಡೆ ಸದ್ದು ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!