February 2, 2026

ವಿಶ್ವದ ಅತ್ಯಂತ ಕೊಳಕು ಮನುಷ್ಯನೆಂದು ಕುಖ್ಯಾತಿ ಪಡೆದಿದ್ದ ವ್ಯಕ್ತಿ ಸಾವು !

0
IMG-20221025-WA0041.jpg

ಸುಮಾರು 60 ವರ್ಷಗಳಿಂದ ಸ್ನಾನ ಮಾಡದಿದ್ದಕ್ಕಾಗಿ “ವಿಶ್ವದ ಅತ್ಯಂತ ಕೊಳಕು ಮನುಷ್ಯ” ಎಂದು ಕುಖ್ಯಾತಿ ಪಡೆದಿದ್ದ ಇರಾನಿನ ವ್ಯಕ್ತಿಯೊಬ್ಬರು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿದೆ.

ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಮೈಕೈ ತೊಳೆಯದೆ ಬದುಕಿದ ಮತ್ತು ಒಂಟಿಯಾಗಿ ಜೀವಿಸುತ್ತಿದ್ದ ಅಮೌ ಹಾಜಿ(94) ಅವರು ಇರಾನಿನ ದಕ್ಷಿಣ ಪ್ರಾಂತ್ಯದ ಫಾರ್ಸ್‌ನ ದೇಜ್ಗಾ ಗ್ರಾಮದಲ್ಲಿ ಭಾನುವಾರ ನಿಧನರಾದರು ಎಂದು ವರದಿಯಾಗಿದೆ.

1950ರ ದಶಕದ ಮಧ್ಯಭಾಗದಿಂದ ಸ್ನಾನ ಮಾಡದೇ ಜೀವಿಸುತ್ತಿದ್ದ ಅಮೌ ಹಾಜಿ ಅವರು, “ಅನಾರೋಗ್ಯಕ್ಕೆ ಒಳಗಾಗುತ್ತೇನೆ ಎಂಬ ಭಯದಿಂದ ಸ್ನಾನ ಮಾಡುವುದನ್ನು ತಪ್ಪಿಸುತ್ತಿದ್ದರು” ಎಂದು ಸ್ಥಳೀಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಇರಾನ್‌ ಮಾಧ್ಯಮಗಳು ವರದಿ ಮಾಡಿದೆ.

ಈ ಮಧ್ಯೆ “ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಗ್ರಾಮಸ್ಥರು ಆತನನ್ನು ಸ್ನಾನ ಮಾಡಿಸಲು ಸ್ನಾನಗೃಹಕ್ಕೆ ಕರೆದೊಯ್ದಿದ್ದರು” ಎಂದು ವರದಿಯಾಗಿದೆ.

ಟೆಹ್ರಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ಯಾರಾಸೈಟಾಲಜಿಯ ಪ್ರಾಧ್ಯಾಪಕ ಡಾ. ಘೋಲಮ್ರೇಜಾ ಮೌಲವಿ ನೇತೃತ್ವದ ವೈದ್ಯರ ತಂಡವು ಹಾಜಿಯ ಮೇಲೆ ಈ ಹಿಂದೆ, ಹಲವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿತ್ತು. “ಯಾವುದೇ ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಅವರ ದೇಹದಲ್ಲಿ ಇಲ್ಲ. ಪರಾವಲಂಬಿಗಳು ಕಂಡುಬಂದಿಲ್ಲ” ಎಂದು ವರದಿ ನೀಡಿತ್ತು.

ಈ ಸುದ್ದಿ ಓದಿದ್ದೀರಾ? ಆಫ್ರಿಕಾ ಮೂಲದ ಹೆತ್ತವರು ಮತ್ತು ಪಾಕಿಸ್ತಾನದ ಅಜ್ಜ! ರಿಷಿ ಸುನಕ್ ಹೇಗೆ ಭಾರತೀಯ ಸಂಜಾತ?

ಹಾಜಿಯವರಿಗೆ ಟ್ರೈಕಿನೋಸಿಸ್ ಎಂಬ ಕಾಯಿಲೆ ಇತ್ತು. ಇದು ಹಸಿ ಅಥವಾ ಕಡಿಮೆ ಬೇಯಿಸಿದ ಮಾಂಸವನ್ನು ತಿನ್ನುವುದರಿಂದ ಬರುವ ಕಾಯಿಲೆ. ಆದಾಗ್ಯೂ, ಈ ಕಾಯಿಲೆಯು ಅವರಿಗೆ ಅಸ್ವಸ್ಥತೆಯನ್ನು ಉಂಟು ಮಾಡಿಲ್ಲ ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ವರದಿ ನೀಡಿದ್ದರು.

2013ರಲ್ಲಿ ಅಮೌ ಹಾಜಿಯವರ ಜೀವನದ ಬಗ್ಗೆ “ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ(The Strange Life of Amou Haji)” ಎಂಬ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿತ್ತು ಎಂದು ವರದಿಗಳು ಉಲ್ಲೇಖಿಸಿದೆ.

Leave a Reply

Your email address will not be published. Required fields are marked *

error: Content is protected !!