ಪಾಕಿಸ್ತಾನದ ನ್ಯೂಸ್ ಆಂಕರ್‌ಗೆ ಗುಂಡಿಕ್ಕಿ ಹತ್ಯೆ: ಪತಿಯ ಬಂಧನ
ಇಸ್ಲಾಮಾಬಾದ್: ಪಾಕಿಸ್ತಾನದ ಸುದ್ದಿ ವಾಹಿನಿಯೊಂದರ ನಿರೂಪಕಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಅವರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಬಿಯಾ ಅಹ್ಸಾನ್ (41) ಕೊಲೆಯಾದ ದುರ್ದೈವಿ. ಮಧ್ಯಾಹ್ನ 3 ಗಂಟೆ ಸುಮಾರಿಗೆ ರಾವಲ್ಪಿಂಡಿಯಲ್ಲಿರುವ ಅವರ ಮನೆಯ ಬೆಡ್ ರೂಮ್‌ನಲ್ಲಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ನಡೆದಾಗ ಅವರ ತಾಯಿ ಹಾಗೂ ಸಹೋದರಿ ಮನೆಯ ಅಂಗಳದಲ್ಲಿದ್ದರು ಎಂದು ವರದಿಯಾಗಿದೆ.
ಗುಂಡಿನ ಶಬ್ದ ಕೇಳಿ, ರಾಬಿಯಾ ಅವರ ಸಹೋದರಿ ಅಲ್ವಿನಾ ಮಲಗುವ ಕೋಣೆಯತ್ತ ಧಾವಿಸಿದಾಗ, ಅವರು ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿದ್ದರು. ಈ ವೇಳೆ ಅವರ ಪತಿ ಕೈಯಲ್ಲಿ ಪಿಸ್ತೂಲ್ ಇತ್ತು ಎನ್ನಲಾಗಿದೆ. ಈ ಸಂಬಂಧ ರಾಬಿಯಾ ಅವರ ಪತಿ ಅಹ್ಸಾನ್ ತಾಹಿರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಬಿಯಾ ಅವರ ಕುತ್ತಿಗೆಯ ಕೆಳಭಾಗದಲ್ಲಿ ಮತ್ತು ಬೆನ್ನಿನ ಬಲ ಭಾಗದಲ್ಲಿ ಗುಂಡೇಟು ತಗಲಿದೆ. ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಂಜಾಬ್ ಫಾರೆನ್ಸಿಕ್ ಸೈನ್ಸ್ ಅಥಾರಿಟಿ ಘಟನಾ ಸ್ಥಳದಿಂದ ಕೊಲೆಗೆ ಬಳಸಲಾದ .30-ಬೋರ್ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.




