ಗ್ಯಾಂಬಿಯಾ ದೇಶದಲ್ಲಿ 66 ಮಕ್ಕಳು ಸಾವು ಪ್ರಕರಣ: ಕೆಮ್ಮು ಸಿರಪ್ ಉತ್ಪಾದನೆಯ ಸ್ಥಗಿತ
ನವದೆಹಲಿ: ಕೆಮ್ಮು ಮತ್ತು ಶೀತದ ಸಿರಪ್ ಸೇವಿಸಿ ಗ್ಯಾಂಬಿಯಾ ದೇಶದಲ್ಲಿ 66 ಮಕ್ಕಳು ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ನಂತರ ಹರ್ಯಾಣ ಸರ್ಕಾರ ಮೈಡನ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ನ ಕೆಮ್ಮು ಸಿರಪ್ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಾಗಿ ವರದಿ ತಿಳಿಸಿದೆ.
ಹರ್ಯಾಣ ಗೃಹ ಮತ್ತು ಆರೋಗ್ಯ ಸಚಿವ ಅನಿಲ್ ವಿಜ್ ಈ ಬಗ್ಗೆ ನೀಡಿರುವ ಮಾಹಿತಿ ಪ್ರಕಾರ, ಕೇಂದ್ರ ಮತ್ತು ಹರ್ಯಾಣ ಆರೋಗ್ಯ ಇಲಾಖೆ ಜಂಟಿಯಾಗಿ ನಡೆಸಿದ ತಪಾಸಣೆ ವೇಳೆ ನಾಲ್ಕು ಸಿರಪ್ ಗಳಲ್ಲಿ ಸುಮಾರು 12 ಅಡ್ಡಪರಿಣಾಮ ಪತ್ತೆಯಾಗಿದ್ದು, ಇದನ್ನು ಗಮನದಲ್ಲಿರಿಸಿಕೊಂಡು ಕೆಮ್ಮು ಮತ್ತು ಶೀತದ ಎಲ್ಲಾ ನಾಲ್ಕು ಸಿರಪ್ ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿ ತಯಾರಾದ ಕೆಮ್ಮು ಮತ್ತು ಶೀತದ ಸಿರಪ್ ಸೇವಿಸಿ ಗ್ಯಾಂಬಿಯಾ ದೇಶದಲ್ಲಿ 66 ಮಕ್ಕಳು ಸಾವನ್ನಪ್ಪಿರುವ ಘಟನೆ ನಂತರ ಔಷಧ ನಿಯಂತ್ರಣ ಪ್ರಾಧಿಕಾರ ಈ ನಾಳ್ಕು ಸಿರಪ್ ಗಳ ಕುರಿತು ತನಿಖೆಗೆ ಆದೇಶ ನೀಡಿತ್ತು.




