ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ
ವಿಟ್ಲ: ವಿಟ್ಲದ ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ದೇಶಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಟ್ಲದ ಮಾಜಿ ಸೇನಾ ಕ್ಯಾಪ್ಟನ್ ದಾಸಪ್ಪ ಪೂಜಾರಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ಬಳಿಕ ಮಾತನಾಡಿದ ಕ್ಯಾಪ್ಟನ್ ದಾಸಪ್ಪ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ದೇಶಪ್ರೇಮದ ಮಹತ್ವವನ್ನು ತಿಳಿಸಿ, ದೇಶದ ರಕ್ಷಣೆಗೆ ತಮ್ಮ ಜೀವನವನ್ನೇ ಸಮರ್ಪಿಸುವ ಸೈನಿಕರ ತ್ಯಾಗ, ಸೇವೆ ಮತ್ತು ದೇಶಭಕ್ತಿಯನ್ನು ಗೌರವಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರಾದ ಶ್ರೀ ನೌಶಿನ್ ಬದ್ರಿಯಾ ಹಾಗೂ ಪ್ರಾಂಶುಪಾಲರಾದ ಶ್ರೀ ಲಿಬಿನ್ ಕ್ಸೇವಿಯರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ನಾಯಕತ್ವ ಪದಗ್ರಹಣ (Investiture Ceremony) ನಡೆಯಿತು. ವಿದ್ಯಾರ್ಥಿ ಪರಿಷತ್‌ನ ನೂತನ ನಾಯಕರು ಪ್ರಾಂಶುಪಾಲರಿಂದ ಪ್ರಮಾಣ ವಚನ ಸ್ವೀಕರಿಸಿ, ಶಾಲೆಯ ಜವಾಬ್ದಾರಿಗಳನ್ನು ನಿರ್ವಹಿಸುವ ಸಂಕಲ್ಪ ಮಾಡಿದರು.
ಕಿರಿಯ ತರಗತಿಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶಭಕ್ತ ನಾಯಕರ ವೇಷಭೂಷಣ ಧರಿಸಿ ಅವರಿಗೆ ಗೌರವ ಸಲ್ಲಿಸಿದರು. ಇತರ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ಸಮೂಹ ಗಾಯನ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ನಾಯಕತ್ವ ಹಾಗೂ ರಾಷ್ಟ್ರೀಯ ಕರ್ತವ್ಯದ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.




