ಎಜ್ಯುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ಇದರ ವತಿಯಿಂದ “ಎಕ್ಸಲೆನ್ಸಿಯಾ 2026” ಕಾರ್ಯಕ್ರಮ
ಬಂಟ್ವಾಳ : ವಿದ್ಯಾರ್ಥಿಗಳು ಸರಕಾರಿ ಕೆಲಸದ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಿ ಕೊಂಡು ವಿದ್ಯಾರ್ಜನೆಗೆ ಒತ್ತು ನೀಡಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ ಕುಲಪತಿ ಡಾ. ಎ.ಎಂ.ಖಾನ್ ಹೇಳಿದರು.
ಎಜ್ಯುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ಇದರ ವತಿಯಿಂದ ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ಭಾನುವಾರ ನಡೆದ “ಎಕ್ಸಲೆನ್ಸಿಯಾ 2026” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೈನಂದಿನ ಬದುಕಿನಲ್ಲಿ ಶಿಸ್ತುಪಾಲನೆ ಅಳವಡಿಸಿ ಕೊಂಡಲ್ಲಿ ಯಶಸ್ವೀ ಜೀವನ ನಮ್ಮದಾಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪ್ರೇರಣಾದಾಯಕ ಭಾಷಣಕಾರರಾಗಿ ಭಾಗವಹಿಸಿದ್ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ನವದೆಹಲಿಯಲ್ಲಿ ನರವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆದಿದ್ದು, ಪ್ರಸ್ತುತ ದೆಹಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನರವಿಜ್ಞಾನ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮೊಹಮ್ಮದ್ ವಾಸಿಕ್, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ನವದೆಹಲಿಯಲ್ಲಿ ನೇತ್ರವಿಜ್ಞಾನದಲ್ಲಿ ಪರಿಣತಿ ಪಡೆದು, ಹಿರಿಯ ರೆಸಿಡೆಂಟ್ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಖತೀಜಾ ಸಲ್ವಾ, ಬೆಂಗಳೂರು ಮೂಲದ ಫಾರ್ಮೆಡ್ ಲಿಮಿಟೆಡ್ ಸಂಸ್ಥೆಯಲ್ಲಿ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಉಮ್ಮರ್ ಬೀಜದಕಟ್ಟೆ,
ಎ.ಕೆ. ಥಮೀಮ್ ಅಂಡ್ ಕಂಪನಿ’ ಸಂಸ್ಥೆಯ ಸಂಸ್ಥಾಪಕ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅಬ್ದುಲ್ ಖಾದರ್ ಥಮೀಮ್,
ದೆಹಲಿ-ಎನ್‌ಸಿಆರ್‌ನ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್‌ನಲ್ಲಿ ಅಂತಿಮ ವರ್ಷದ ಬಿಬಿಎ–ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಜಸೀಮ್ ಅಹ್ಮದ್ ಸಿರಾಜ್ ಅವರು ಸ್ಪೂರ್ತಿದಾಯಕ ಮಾತಿನೊಂದಿಗೆ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.
ಇದೇ ವೇಳೆ ಕತಾರ್ ರಾಷ್ಟ್ರೀಯ ಅಂಡರ್-19 ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಯುವ ಕ್ರಿಕೆಟಿಗ ಎಸ್ಸಾಮ್ ಮನ್ಸೂರ್ ಹಾಗೂ ಪ್ರೇರಣಾ ಭಾಷಣಕಾರ ರಫೀಕ್ ಮಾಸ್ಟರ್ ಅವರಿಗೆ ಎಜ್ಯುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ನ “ವರ್ಷದ ಬ್ಯಾರಿ ಅವಾರ್ಡ್ 2026” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಜ್ಯುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ಸ್ವಾಗತಿಸಿ, ರಫೀಕ್ ಮಾಸ್ಟರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಬೆಂಗಳೂರು ಆಚಾರ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಹಮ್ಮದ್ ಸ್ವರೂಫ್ ಕಾರ್ಯಕ್ರಮ ನಿರೂಪಿಸಿದರು.




