ಮಂಗಳೂರು: McDonald’s ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳಿಂದ ದಾಳಿ
ಮಂಗಳೂರು: ನಗರದಲ್ಲಿ ಆಹಾರ ಸುರಕ್ಷ ಅಧಿಕಾರಿಗಳು ಆರಂಭಿಸಿರುವ ಆಹಾರ ಮಳಿಗೆಗಳ ಮೇಲೆ ದಾಳಿಯನ್ನು ಮುಂದುವರಿಸಿದ್ದು, ರವಿವಾರವೂ ನಗರದ ಕೆ.ಎಸ್.ರಾವ್ ರಸ್ತೆಯ ಮಾಲ್ ಒಂದರಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆ McDonald’s ಆಹಾರ ಮಳಿಗೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಕೆಎಸ್ ರಾವ್ ರಸ್ತೆಯ ಮಾಲ್‌ನಲ್ಲಿರುವ ಕೆಎಫ್‌ಸಿಗೆ ದಾಳಿ ನಡೆಸಿ ಅಲ್ಲಿ ಕಲುಷಿತ ಆರೋಗ್ಯ ಪೂರೈಕೆಯಾಗುತ್ತಿರುವುದನ್ನು ಪತ್ತೆ ಹಚ್ಚಿದ್ದರು.
ದಾಳಿಯನ್ನು ಮುಂದುವರಿಸಿರುವ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮೆಕ್‌ಡೊನಾಲ್ಡ್ ಸಂಸ್ಥೆಯ ಅಡುಗೆ ಕೋಣೆ, ಸ್ಟೋರೇಜ್ ಕೊಠಡಿಗಳಲ್ಲಿ ಪರಿಶಿಲನೆ ನಡೆಸಿದರು.
ಕೋಲ್ಡ್ ಸ್ಟೋರೇಜ್, ಡೀಪ್ ಫ್ರೀಝಿಂಗ್, ತಾಪಮಾನ, ಬ್ರೆಡ್, ಬನ್, ಸಾಸ್, ತರಕಾರಿ ವಸ್ತುಗಳು ಬರ್ಗರ್ ತಯಾರಿಗೆ ಬೇಕಾದ ವಸ್ತುಗಳಲ್ಲಿ ಅವಧಿ ಮೀರಿದ ವಸ್ತುಗಳು ಇವೆಯೇ, ಗುಣಮಟ್ಟ ಇದೆಯೇ ಎಂದು ತಪಾಸಣೆ ನಡೆಸಿದ್ದಾರೆ. ಗುಣ ಮಟ್ಟ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸುವ ನಿಟ್ಟಿನಲ್ಲಿ ಸ್ಯಾಂಪಲ್ ಸಂಗ್ರಹಿಸಿದ್ದಾರೆ.
ಮಳಿಗೆಯಲ್ಲಿ ನಿಯಮಕ್ಕೆ ಅನುಗುಣವಾಗಿ ಉಪಕರಣಗಳನ್ನು ಬಳಸುತ್ತಿರುವುದು ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಅವಧಿ ಮೀರಿದ ವಸ್ತುಗಳು ಪತ್ತೆಯಾಗಿಲ್ಲ. ಅವಧಿ ಮೀರದಿದ್ದರೂ, ಅದನ್ನು ಸಂಗ್ರಹಿಡುವ ವೇಳೆ ಸೂಕ್ತ ತಾಪಮಾನದಲ್ಲಿ ಇರಿಸದಿದ್ದರೆ ಗುಣಮಟ್ಟ ಕೆಟ್ಟು ಹೋಗುವ ಸಾಧ್ಯತೆಯಿದೆ. ಮಾಂಸ ಹಾಗೂ ಸಸ್ಯಾಹಾರ ಗಳನ್ನು ಒಂದೇ ಫ್ರೀಝರ್ ನಲ್ಲಿ ಇಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




