ಸರಕಾರದ ಅನ್ನಭಾಗ್ಯಕ್ಕೂ ಕನ್ನ ಹಾಕಿದ್ದು ಸಿದ್ದರಾಮಯ್ಯ: ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ
ಬೆಂಗಳೂರು: ‘ಅನ್ನಭಾಗ್ಯದ ಅವ್ಯವಹಾರ ತನಿಖೆ ನಡೆಸುತ್ತಿದ್ದ ಅನುರಾಗ್ ತಿವಾರಿ ಅವರು ಉತ್ತರ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಾವೀಗಿಡಾದರು. ಈ ರೀತಿಯ ಆಡಳಿತದ ಪಾರದರ್ಶಕತೆ ಮತ್ತು ಅನ್ನಭಾಗ್ಯಕ್ಕೂ ಕನ್ನ ಹಾಕಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ‘ಜನಸ್ಪಂದನ’ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರ ಮುಂದಿಟ್ಟಿದ್ದಾರೆ.
ಜನಸ್ಪಂದನ ಕಾರ್ಯಕ್ರಮಕ್ಕೆ ಅಭೂತಪೂರ್ವ ಜನಸ್ಪಂದನೆ ದೊರಕಿದೆ. ಇದು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರು ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
‘ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು. ಆದರೆ, ಕರ್ನಾಟಕದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮರ್ಥವಾಗಿ ನಿಭಾಯಿಸಿದ್ದರು’ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
‘ಅಧಿಕಾರದ ಆಸೆಗಾಗಿ, ಬಹುಮತವಿಲ್ಲದಿದ್ದರೂ ಜೆಡಿಎಸ್ ಜೊತೆ ಕೈ ಜೋಡಿಸಿದ ಸಿದ್ದರಾಮಯ್ಯನವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಸಮಾಜದ ಎಲ್ಲಾ ವರ್ಗಗಳಿಗೂ ಅವಕಾಶ ನೀಡುವ ಮೂಲಕ ಎಲ್ಲರೂ ಅಭಿವೃದ್ಧಿಯಾಗ ಬೇಕೆಂಬುದೇ ನಮ್ಮ ಸರ್ಕಾರದ ಆಶಯವಾಗಿದೆ ಎಂದರು.




