ಹೊಸ ಸಂಕಲ್ಪದೊಂದಿಗೆ, ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ದಿನವಿದು: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ದೇಶಾದ್ಯಂತ ಮನೆಮನೆಯಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿ ಕೆಂಪುಕೋಟೆಯ ಮೇಲೆ ಸತತ 9ನೇ ಬಾರಿ ರಾಷ್ಟ್ರ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಹೊಸ ಸಂಕಲ್ಪದೊಂದಿಗೆ, ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ದಿನವಿದು. ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತ ತನ್ನ 75 ವರ್ಷಗಳ ಪ್ರಯಾಣದಲ್ಲಿ ಅಮೂಲ್ಯವಾದ ಸಾಮರ್ಥ್ಯವನ್ನು ಹೊಂದಿದ್ದು, ಅನೇಕ ಸವಾಲುಗಳನ್ನು ಎದುರಿಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ ಎಂದರು.
ತ್ಯಾಗ, ಬಲಿದಾನ, ನಿರಂತರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದೆ. ಸ್ವಾತಂತ್ರ್ಯ ಕೇವಲ ಒಬ್ಬರ ಸ್ವತ್ತಲ್ಲ. ಸ್ವಾತಂತ್ರ್ಯ ಎಲ್ಲರ ಹಕ್ಕು. ಎಲ್ಲರಿಗೂ ಸೇರಿದ ಈ ಸ್ವಾತಂತ್ರ್ಯ ಲಭಿಸಲು ಅನೇಕ ಮಹನೀಯರ ಕೊಡುಗೆ ಇದೆ. ಜೊತೆಗೆ ಹೋರಾಟವೂ ಸಾವಿರಾರು ಅನಾಮಧೇಯರಿಗೆ ಸೇರಿದೆ ಎಂದರು.
ಹೋರಾಟದಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವಿದ್ಯಾವಂತರು ಸೇರಿದಂತೆ ಹಲವರ ಅಂದಿನ ಪರಿಶ್ರಮ ಇಂದಿನ ಭವಿಷ್ಯ ಭಾರತವನ್ನು ರೂಪಿಸುತ್ತಿದೆ.
”ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಾವು ದೇಶಾದ್ಯಂತ 75 ವರ್ಷಗಳ ಸ್ವಾತಂತ್ರ್ಯದ ಕುರಿತು ನಮ್ಮ ಚರ್ಚೆಯನ್ನು ಪ್ರಾರಂಭಿಸಿದ್ದೇವೆ. ನಾವು ಮುಂದಿನ ಬಾರಿ ಭೇಟಿಯಾದಾಗ, ನಮ್ಮ ಮುಂದಿನ 25 ವರ್ಷಗಳ ಪ್ರಯಾಣವು ಈಗಾಗಲೇ ಪ್ರಾರಂಭವಾಗಲಿದೆ, ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಿ” ಎಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಮೂಲಕ ದೇಶದ ಜನತೆ ಕರೆ ನೀಡಿದ್ದು, ದೇಶದೆಲ್ಲೆಡೆ ತ್ರಿವರ್ಣ ಧ್ವಜ ಹಾರಾಡುತ್ತಿದೆ ಎಂದರು.




