ಇರಾನ್ ಮಾಜಿ ಸರ್ವೋಚ್ಚ ನಾಯಕ ಆಯತುಲ್ಲಾ ಖಾಮಿನೈ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ
ನವದೆಹಲಿ: ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿರುವ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತುಲ್ಲಾ ಖಾಮಿನೈ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ ಆಹ್ವಾನ ನೀಡಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಯತುಲ್ಲಾ ಖಾಮಿನೈ ಅವರ ಅಂತ್ಯಕ್ರಿಯೆ ಇರಾನ್‌ನ ಸ್ಥಳೀಯ ಸಮಯದ ಪ್ರಕಾರ ಜುಲೈ 4ರಿಂದ ಜುಲೈ 9ರ ನಡುವೆ ನಡೆಯಲಿದ್ದು, ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಹಾಗೂ ವಿದೇಶಿ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.
ಒಂದು ವಾರ ಕಾಲ ನಡೆಯಲಿರುವ ಆಯತುಲ್ಲಾ ಖಾಮಿನೈ ಅವರ ಅಂತ್ಯಕ್ರಿಯೆ ಕಾರ್ಯಕ್ರಮವನ್ನು ಖಾಮಿನೈ ಅವರ ತವರು ಹಾಗೂ ಶಿಯಾ ಮುಸ್ಲಿಮರ ಪಾಲಿಗೆ ಪವಿತ್ರ ನಗರವಾಗಿರುವ ಮಷಾದ್ ನಲ್ಲಿ ನಡೆಸಲು ಇರಾನ್ ಸರ್ಕಾರ ಸಿದ್ಧತೆಗಳನ್ನು ಆರಂಭಿಸಿದೆ.
ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಆಯತುಲ್ಲಾ ಖಾಮಿನೈ ಮೃತಪಟ್ಟಿದ್ದರು.
ಸಾರ್ವಜನಿಕರು ತಮ್ಮ ಅಂತಿಮ ನಮನ ಸಲ್ಲಿಸಲು ಜುಲೈ 4 ಮತ್ತು 5ರಂದು ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾ ಕಾಂಪ್ಲೆಕ್ಸ್ ನಲ್ಲಿ ಆಯತುಲ್ಲಾ ಖಾಮಿನೈ ಅವರ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಜುಲೈ 6ರಂದು ಸಕಲ ಸರ್ಕಾರಿ ಗೌರವದೊಂದಿಗೆ ಖಾಮಿನೈ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ಈ ಸಂದರ್ಭದಲ್ಲಿ ಟೆಹ್ರಾನ್ ಪ್ರಾಂತ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.




