ವಿಟ್ಲ: ಪರವಾನಿಗೆ ಇಲ್ಲದೆ ಜಾನುವಾರು ಸಾಗಾಟ: ನಾಲ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿಟ್ಲ: ಯಾವುದೇ ಪರವಾನಿಗೆ ಇಲ್ಲದೆ ಜಾನುವಾರನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಾಹನದಲ್ಲಿದ್ದ ಚಾಲಕ ಬಂಟ್ವಾಳ ಕರೋಪಾಡಿ ನಿವಾಸಿ ಒ.ಪಿ. ಅಬ್ದುಲ್ಲಾ (45) ಹಾಗೂ ಸುಬ್ರಮಣ್ಯ (55) ಅವರನ್ನು ವಿಚಾರಣೆ ನಡೆಸಿದಾಗ, ಜಾನುವಾರನ್ನು ಸಾಗಿಸಲು ಯಾವುದೇ ಪರವಾನಿಗೆ ಹೊಂದಿರದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿದ್ದ ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ಎಂಬವರ ಸೂಚನೆಯ ಮೇರೆಗೆ ಜಾನುವಾರನ್ನು ಸಾಗಿಸುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.
ಪೊಲೀಸರು ಜಾನುವಾರು ಸಹಿತ ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು, ಒ.ಪಿ. ಅಬ್ದುಲ್ಲಾ, ಸುಬ್ರಮಣ್ಯ, ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 233/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ವಿಟ್ಲ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




