July 5, 2026

ಪಿಎಸ್ಐ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಕೊಲೆ ಆರೋಪಿ: ಪಿಎಸ್ಸೈ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

0
image_editor_output_image1409747846-1657951244033.jpg

ಕಲಬುರಗಿ: ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ‌ಕಂಬಾನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ವಿಜಯಕುಮಾರ್ ಹಳ್ಳಿ ಎಂಬಾತನನ್ನು ಪಂಚನಾಮೆಗೆ ಕರೆದೊಯ್ದ ಸಂದರ್ಭದಲ್ಲಿ ಶಹಾಬಾದ್ ಪಿಎಸ್ಐ ಸುವರ್ಣಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಸುವರ್ಣಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಪೊಲೀಸರು ವಿಜಯಕುಮಾರನತ್ತ ಗುಂಡು ಹಾರಿಸಿದ್ದು, ಆತನಿಗೂ ಗಾಯಗಳಾಗಿವೆ. ಇಬ್ಬರನ್ನೂ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗೆ ಗಿರೀಶ ಕಂಬಾನೂರ ಅವರನ್ನು ಎರಡು ತಲ್ವಾರ್‌ಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಎರಡು ತಂಡಗಳಲ್ಲಿ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದರು.

ತಡರಾತ್ರಿ ಆರೋಪಿ ವಿಜಯಕುಮಾರ್ ಹಳ್ಳಿ ಹಾಗೂ ಇತರರನ್ನು ಬಂಧಿಸಲಾಗಿತ್ತು. ಶಹಾಬಾದ್ ಬಳಿಯ ತೊನಸನಹಳ್ಳಿ ಗ್ರಾಮದ ಬಳಿ ತಲ್ವಾರ್ ಹಾಗೂ ಬಂದೂಕು ಎಸೆದು ಹೋಗಿದ್ದ ಜಾಗದಲ್ಲಿ ಪಂಚನಾಮೆ ನಡೆಸಲು ಆರೋಪಿಗಳನ್ನು ಕರೆದೊಯ್ಯಲಾಗಿತ್ತು.

ಬಂದೂಕು ಎಸೆದಿದ್ದ ಸ್ಥಳವನ್ನು ತೋರಿಸುವ ನಟನೆ ಮಾಡಿದ ವಿಜಯಕುಮಾರ್ ಹಳ್ಳಿ ಪಿಎಸ್ಐ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾ‌ನೆ. ತಕ್ಷಣ ಎಚ್ಚೆತ್ತ ಸಿಪಿಐ ಪ್ರಕಾಶ್ ಯಾತನೂರ ವಿಜಯಕುಮಾರ್‌ನತ್ತಲೂ ಗುಂಡು ಹಾರಿಸಿದರು. ಎಡಗಾಲಿಗೆ ಗಾಯವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!