ಗುಂಪು ಹತ್ಯೆಯ ವಿರುದ್ಧ ಹೇಳಿಕೆಗೆ ತೀವ್ರ ವಿರೋಧ ಹಿನ್ನೆಲೆ: ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸಾಯಿ ಪಲ್ಲವಿ
ಚೆನ್ನೈ: ಈ ಹಿಂದೆ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಈಗ ನಡೆಯುತ್ತಿರುವ ಗುಂಪು ಹಲ್ಲೆ ಎರಡೂ ಒಂದೇ ಎಂದು ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣ ಆಗಿತ್ತು. ಒಂದು ವರ್ಗದ ನೆಟ್ಟಿಗರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಯಿ ಪಲ್ಲವಿ ಅವರು ಈಗ ಸ್ಪಷ್ಟನೆ ಕೂಡ ನೀಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದು, ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಪಪಡಿಸಿದ್ದಾರೆ. ಈ ವಿಡಿಯೋಗೆ ಸಾವಿರಾರು ಕಾಮೆಂಟ್ ಗಳು ಬಂದಿವೆ. ಸಾಕಷ್ಟು ಜನರು ಸಾಯಿ ಪಲ್ಲವಿಗೆ ಬೆಂಬಲವಾಗಿ ನಿಂತಿದ್ದಾರೆ. #westandwithpallavi ಎಂಬ ಹ್ಯಾಶ್ ಟ್ಯಾಗ್ ಮೂಲಕ ಅನೇಕರು ಅವರಿಗೆ ಸಾಥ್ ನೀಡಿದ್ದಾರೆ.
ಸಾಯಿ ಪಲ್ಲವಿ ಅವರು ಹಂಚಿಕೊಂಡಿರುವ ಸ್ಪಷ್ಟನೆಯ ವಿಡಿಯೋ ಸಖತ್ ವೈರಲ್ ಆಗಿದೆ. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ 12 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಕೆಲವರು ಸಾಯಿ ಪಲ್ಲವಿ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಕೂಡ. ‘ಈಗಲೂ ಈ ನಟಿಗೆ ತಾನು ಏನು ಮಾತನಾಡುತ್ತಿದ್ದೇನೆ ಎಂಬುದು ಸರಿಯಾಗಿ ತಿಳಿದಿಲ್ಲ’ ಎಂಬ ಕಮೆಂಟ್ ಸಹ ಬಂದಿದೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಹಿಂಸೆ ತಪ್ಪು. ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ಮಾಡುವುದು ಪಾಪ. ಗುಂಪು ಹಲ್ಲೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದರು. ನಿಜಕ್ಕೂ ಅದು ಬೇಸರದ ವಿಚಾರ. ಬೇರೆಯವರ ಜೀವವನ್ನು ತೆಗೆದುಕೊಳ್ಳುವ ಹಕ್ಕು ನಮಗೆ ಇಲ್ಲ. ನಾನು ಎಂಬಿಬಿಎಸ್ ಪದವೀಧರೆಯಾಗಿ ಎಲ್ಲರ ಜೀವವೂ ಮುಖ್ಯ ಎಂದು ನಂಬಿದ್ದೇನೆ. ಎಲ್ಲಾ ಭಾರತೀಯರು ಸಹೋದರರಿದ್ದಂತೆ ಎಂದು ಹೇಳುತ್ತಾ ಬೆಳೆದವರು ನಾವು. ನನ್ನ ಮನಸ್ಸಲ್ಲಿ ಅದು ಆಳವಾಗಿ ಕೂತಿದೆ. ನಾನು ಮಾತನಾಡುವಾಗ ತಟಸ್ಥವಾಗಿ ಮಾತನಾಡುತ್ತೇನೆ. ನಾನು ಮಾತನಾಡಿದ್ದನ್ನು ಬೇರೆಯ ರೀತಿ ಅರ್ಥೈಸಿದ್ದು ನಿಜಕ್ಕೂ ಬೇಸರ ತರಿಸುವಂತಹದ್ದು. ಪೂರ್ತಿ ಸಂದರ್ಶನ ನೋಡದೆ ಕೆಲವರು ಮಾತನಾಡಿದ್ದು ಬೇಸರದ ವಿಚಾರ. ನನ್ನ ಪರವಾಗಿ ನಿಂತವರಿಗೆ ಧನ್ಯವಾದ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.




