August 22, 2026

ಸುಳ್ಯ: ಸಂಪಾಜೆ ಕಾಂಗ್ರೆಸ್‌ನಲ್ಲಿ ಸ್ಪೋಟಗೊಂಡ ಭಿನ್ನಮತ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಲಿ ಗ್ರಾಮ ಪಂಚಾಯತ್ ಸದಸ್ಯ ಪಕ್ಷಕ್ಕೆ ರಾಜಿನಾಮೆ

0
IMG-20220608-WA0014.jpg

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರ ಬದಲಾವಣೆ ವಿಚಾರ ತಾರಕ್ಕೇರಿದ್ದು, ಸಂಪಾಜೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿದೆ.

ಈ ವಿಷಯಕ್ಕೆ ಸಂಭಂದಿಸಿ ಸಂಪಾಜೆ ಕಾಂಗ್ರೆಸ್ ಮುಖಂಡ ಹಾಗು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗು ಹಾಲಿ‌ ಸದಸ್ಯ ಕೆ.ಆರ್. ಜಗದೀಶ್ ರೈ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ‌ ನೀಡಿದ್ದು ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಅಧ್ಯಕ್ಷ ಗಾದಿಯ ಕಿತ್ತಾಟದಲ್ಲಿ ಪಕ್ಷದ ಒಂದು ವಿಕೆಟ್ ಉರುಳಿದಂತಾಗಿದೆ.

ಅಧ್ಯಕ್ಷ ಬದಲಾವಣೆಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಸಂಪಾಜೆ ಕಾಂಗ್ರೆಸ್ ವಲಯ ಸಮಿತಿ ಅಧ್ಯಕ್ಷ ಸೋಮಶೇಖರ‌ ಕೊಯಿಂಗಾಜೆ ಅವರು ಬುಧವಾರ ಸಂಜೆ ವಲಯ ಕಾಂಗ್ರೆಸ್ ಸಮಿತಿ ಸಭೆಯನ್ನು ಕರೆದಿದ್ದರು. ಸಭೆಗೆ ತೆರಳಿದ್ದ ಜಗದೀಶ್ ರೈ ಅವರು ರಾಜಿನಾಮೆ ಸಲ್ಲಿಸಿ ಸಭೆಯಿಂದ ಹೊರ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಸಂಪಾಜೆ ಗ್ರಾಮ ಪಂಚಾಯತ್ ಆಡಳಿತ ಕಾಂಗ್ರೆಸ್ ಬೆಂಬಲಿತರ ಕೈಯಲ್ಲಿದೆ. ಎರಡೂವರೆ ವರ್ಷದ ಅಧ್ಯಕ್ಷತೆಯ ಅವಧಿಯನ್ನು ಜಿ.ಕೆ.ಹಮೀದ್ ಮತ್ತು ಶೌವಾದ್ ಗೂನಡ್ಕ ಮಧ್ಯೆ ಒಂದೂ ಕಾಲು ವರ್ಷದಂತೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ, ಆದರೆ ಒಂದೂಕಾಲು ವರ್ಷ ಅವಧಿ ಮುಗಿದಿದ್ದು ಜಿ.ಕೆ.ಹಮೀದ್ ರಾಜಿನಾಮೆ ನೀಡಬೇಕು ಎಂದು ಸಂಪಾಜೆಯ ಪಕ್ಷದ ಒಂದು ವಿಭಾಗ ಒತ್ತಾಯಿಸುತ್ತಿದ್ದಾರೆ. ಅಂತಹಾ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿರುವ ಜಿ.ಕೆ.ಹಮೀದ್ ರಾಜಿನಾಮೆಗೆ ಮುಂದಾಗಿಲ್ಲ. ಇದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷತೆಯ ಹೆಸರಿನಲ್ಲಿ ಸಂಪಾಜೆ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉಂಟಾಗಿದೆ.
ಈ ವಿಷಯ ಮುಂದಕ್ಕೆ ಸಂಪಾಜೆಯ ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಕಾದುನೋಡಬೇಕಾಗಿದೆ.
ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಜಗದೀಶ್ ರವರು ಪಕ್ಷದಲ್ಲಿ ಉಂಟಾಗಿರುವ ಕೆಲವೊಂದು ಬೆಳವಣಿಗೆಗಳು ಬೇಸರ ತರಿಸಿದೆ ಈ ಹಿನ್ನಲೆಯಲ್ಲಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದೇನೆ. ಗ್ರಾಮ ಪಂಚಾಯತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!