March 26, 2026

ಹಾಸನ: ಜೆಡಿಎಸ್ ಮುಖಂಡ, ಹಾಸನ ನಗರಸಭೆ ಸದಸ್ಯನ ಅಟ್ಟಾಡಿಸಿ, ಬರ್ಬರ ಹತ್ಯೆ

0
image_editor_output_image1079316504-1654139185976

ಹಾಸನ: ಜೆಡಿಎಸ್ ಮುಖಂಡ, ಹಾಸನ ನಗರಸಭೆ ಸದಸ್ಯರೊಬ್ಬರನ್ನ ಹಾಸನ ನಗರದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಜೆಡಿಎಸ್ ಮುಖಂಡ, ಹಾಸನ ನಗರಸಭೆ 16ನೇ ವಾರ್ಡ್ ಸದಸ್ಯ ಪ್ರಶಾಂತ್ ನಾಗರಾಜ್(41) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಾಸನ ನಗರದ ಜವೇನಹಳ್ಳಿ ಮಠದ ರಸ್ತೆಯ, ಲಕ್ಷ್ಮೀಪುರ ಬಡಾವಣೆಯಲ್ಲಿ ಒಬ್ಬರೇ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಹಿಂಬಾಲಿಸಿದ ಹಂತಕರು ಅಟ್ಟಾಡಿಸಿ ಬರ್ಬರವಾಗಿ ಕೊಂದು ಪರಾರಿಯಾಗಿದ್ದಾರೆ.

ನಗರಸಭೆ 16ನೇ ವಾರ್ಡ್‌ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಸುಮಾರು 1,700 ಮತಗಳ ಅಂತರದಿಂದ ಗೆದಿದ್ದ ಪ್ರಶಾಂತ್, ಸಂಜೆ ಕೆಲಸ ಮುಗಿಸಿ ಮನೆ ತಲುಪಲು ಕೇವಲ ಅರ್ಧ ಕಿಮೀ ಇದ್ದಾಗಲೇ ದಿಢೀರ್ ಅಟ್ಯಾಕ್ ಮಾಡಿ ದುರುಳರು ಜೀವ ತೆಗೆದಿದ್ದಾರೆ. ತಲೆ ಮತ್ತು ಕೈ ಭಾಗಕ್ಕೆ ಬಲವಾಗಿ ಹೊಡೆದು ಗುರುತು ಸಿಗದಂತೆ ಕೊಚ್ಚಿದ್ದು, ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಪ್ರಶಾಂತ್ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಹಿಮ್ಸ್ ಆಸ್ಪತ್ರೆ ಆವರಣಕ್ಕೆ ದೌಡಾಯಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಯಾವುದೇ ಕಾರಣಕ್ಕೂ ಮೃತದೇಹವನ್ನು ಆಂಬುಲೆನ್ಸ್‌ನಿಂದ ಕೆಳಗಿಳಿಸಕೂಡದು. ನಗರದಲ್ಲಿ ರೌಡಿಸಂಗೆ ಪೊಲೀಸ್ ಇಲಾಖೆ ಬೆಂಬಲವಾಗಿ ನಿಂತಿದೆ. ಇದರಿಂದಲೇ ಗೂಂಡಾಗಿರಿ ಹೆಚ್ಚಿ, ಚುನಾಯಿತ ಪ್ರತಿನಿಧಿಯ ಕೊಲೆ ನಡೆದಿದೆ ಎಂದು ಗುಡುಗಿದರು. ಕರ್ತವ್ಯಲೋಪ ಆರೋಪದಡಿ ಯಾರದೋ ಗುಲಾಮರಾಗಿ ಕೆಲಸ ಮಾಡುತ್ತಿರುವ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಆರ್.ಶ್ರೀನಿವಾಸ್‌ಗೌಡ, ಹೆಚ್ಚುವರಿ ಎಸ್‌ಪಿ ಡಾ.ಬಿ.ಎನ್.ನಂದಿನಿ, ಪೆನ್‌ಶೆನ್ ಮೊಹಲ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜೆಡಿಎಸ್ ಮುಖಂಡನ ಹತ್ಯೆಯಿಂದಾಗಿ ಹಾಸನದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ಹಾಕಲಾಗಿದೆ. ಆದಷ್ಟು ಬೇಗ ಪೊಲೀಸರು ಕೊಲೆಗಡುಕರನ್ನು ಪತ್ತೆಹಚ್ಚಿ, ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Leave a Reply

Your email address will not be published. Required fields are marked *

error: Content is protected !!