July 6, 2026

ಮಂಗಳೂರು: ಚಿನ್ನದ ವ್ಯಾಪಾರಿಯ ಮೇಲೆ ದರೋಡೆ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿಗಳ ಫೋಟೋ ಬಿಡುಗಡೆ ಮಾಡಿದ ಪೊಲೀಸ್ ಇಲಾಖೆ

0
image_editor_output_image-1020700006-1783344708119

ಮಂಗಳೂರು: ಮಂಗಳೂರಿನಲ್ಲಿ ಚಿನ್ನದ ವ್ಯಾಪಾರಿಯ ಮೇಲೆ ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಫೋಟೋಗಳನ್ನು ಬಿಡುಗಡೆ ಮಾಡಿ, ಸಾರ್ವಜನಿಕರ ಸಹಕಾರ ಕೋರಿದ್ದಾರೆ. ದರೋಡೆ ಕೃತ್ಯ ಎಸಗಿದ ನಟೋರಿಯಸ್ ದರೋಡೆಕೋರರ ಫೋಟೋ ಬಿಡುಗಡೆ ಮಾಡಿದ್ದಾರೆ.

ಪಾಂಡಿಚೇರಿ ಮೂಲದ ಶಿಬಿನ್‌ ಗಂಗಾಧರನ್ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿದ್ದು ಆತನದ್ದು ಸೇರಿ ಒಟ್ಟು 14 ಮಂದಿ ಆರೋಪಿಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಕೇರಳದ ವಿವಿಧ ಜಿಲ್ಲೆಗಳಿಗೆ ಸೇರಿದ ಶ್ರೀರಾಗ್, ಅತುಲ್, ಮಿಥುನ್‌ಲಾಲ್, ಅಜೀರ್ ತರಾಯಿಲ್,‌ ವೈಶಾಕ್, ಅಸೀರ್ ಪಯ್ಯನ್ನೂರ್, ಪ್ರಣವ್, ವಿಜಿಲ್‌ ಅಂಜರಕಂಡಿ, ಕೊಡಗಿನ ಉಬೈದ್, ಫಿರೋಜ್, ಮೊಯ್ದು ಅಬ್ಬಾಸ್, ಜಿಯಾದ್, ಜಮೀರ್ ಅಲಿಕಾ ಎಂಬವರು ಆರೋಪಿಗಳು ಎಂದು ಗುರುತಿಸಲಾಗಿದೆ.

ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಕಾರಣ ಆರೋಪಿಗಳ ಬಂಧನಕ್ಕೆ ಸಹರಿಸುವಂತೆ ಮಂಗಳೂರು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವುದು‌. ಅವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕ ಹಾಗೂ ಕೇರಳದಲ್ಲಿ ಆರೋಪಿಗಳ ಫೋಟೋ ಹಾಗೂ ಹೆಸರನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಆರೋಪಿಗಳ ಫೋಸ್ಟರ್ ಅಂಟಿಸಲು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಮಂಗಳೂರು ಪೊಲೀಸರು ಕೇರಳ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಆರೋಪಿಗಳ ಸುಳಿವು ಸಿಗದ ಕಾರಣ ಫೋಟೊ ಬಿಡುಗಡೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!